ನವದೆಹಲಿ: ಎಎಪಿ ನಾಯಕಿ ಆತಿಶಿ ದೆಹಲಿಯ ಎಂಟನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಆತಿಶಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳದೇ, ಮತ್ತೊಂದು ಕುರ್ಚಿಯನ್ನು ಬಳಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಗೌರವಾರ್ಥವಾಗಿ ಅವರು ಕುಳಿತುಕೊಳ್ಳುತ್ತಿದ್ದ ಕುರ್ಚಿಯನ್ನು ಖಾಲಿ ಬಿಟ್ಟಿದ್ದು, ಅವರಿಗೆ ಮೀಸಲಿದ್ದ ಕುರ್ಚಿ ಬದಲಿಗೆ ಮತ್ತೊಂದು ಕುರ್ಚಿ ಬಳಸಿದ್ದೇನೆ ಎಂದು ಆತಿಶಿ ತಿಳಿಸಿದ್ದಾರೆ.
ಈ ಕುರಿತಂತೆ ಆತಿಶಿ ತಮ್ಮ ಎಕ್ಸ್ ನಲ್ಲಿ, ‘ಇಂದು ದೆಹಲಿಯ ಮುಖ್ಯಮಂತ್ರಿಯಾಗಿ ನಾನು ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ. ತನ್ನ ಅಣ್ಣ ರಾಮ 14 ವರ್ಷಗಳ ವನವಾಸ ಕೈಗೊಂಡ ಸಂದರ್ಭ ಭರತ ಅನುಭವಿಸಿದ ನೋವನ್ನೇ ನಾನು ಇಂದು ಅನುಭವಿಸುತ್ತಿದ್ದೇನೆ. ರಾಮನ ಚಪ್ಪಲಿಯನ್ನು ಇಟ್ಟುಕೊಂಡು ಅಯೋಧ್ಯೆಯನ್ನು 14 ವರ್ಷಗಳ ಕಾಲ ಭರತ ಆಳಿದಂತೆಯೇ, ನಾನು ದೆಹಲಿ ಸರ್ಕಾರವನ್ನು 4 ತಿಂಗಳು ನಡೆಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಆತಿಶಿ ಅವರ ಇಂತಹ ನಡೆಯನ್ನು ಖಂಡಿಸಿ, ಇದೊಂದು ರಾಜಕೀಯ ನಾಟಕ ಎಂದು ಆರೋಪಿಸಿದ್ದಾರೆ. ಹಾಗೆಯೇ ‘ಆತಿಶಿ ಸರಕಾರದ ಈ ನಾಟಕ ಇಲ್ಲಿಗೆ ನಿಲ್ಲಬೇಕು. ಇಂದು ಆತಿಶಿ ಅವರು ಮುಖ್ಯಮಂತ್ರಿ ಕುರ್ಚಿಯ ಪಕ್ಕದಲ್ಲಿ ಇನ್ನೊಂದು ಕುರ್ಚಿಯನ್ನು ಖಾಲಿಯಿಟ್ಟು ಅಧಿಕಾರ ವಹಿಸಿಕೊಂಡರು. ಅಂದರೆ ನಿಜವಾದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಗಿದ್ದು, ಆತಿಶಿ ದೆಹಲಿ ಸರ್ಕಾರದ ಮನಮೋಹನ್ ಸಿಂಗ್ ಆಗಿದ್ದಾರೆ. ಆ ಮೂಲಕ ಬಾಬಾ ಸಾಹೇಬರ ಸಂವಿಧಾನವನ್ನು ಅಪಹಾಸ್ಯ ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.