
ತಮಿಳುನಾಡು; ಮಳ್ಳಿಯಂತೆ 6 ಜನರಿಗೆ ಉಂಡೆ ನಾಮ ಹಾಕಿ ಮದುವೆಯಾಗಿ ಸೈಲೆಂಟ್ ಆಗಿ ಎಸ್ಕೇಪ್ ಆಗುತ್ತಿದ್ದ ಖತರ್ನಾಕ್ ಒಬ್ಬಳು 7ನೇ ಮದುವೆಗೆ ಸಿದ್ಧವಾಗುತ್ತಿದ್ದಂತೆ ಸಿಕ್ಕಿಬಿದ್ದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಸಂಧ್ಯಾ(26) ಸಿಕ್ಕಿಬಿದ್ದ ಯುವತಿ.
ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಪರಮತಿವೆಲ್ಲೂರು ಸಮೀಪದ ಕಳ್ಳಿಪಾಳ್ಯಂನ ನಿವಾಸಿಯಾದ ಧನಪಾಲ್ ಎಂಬುವವರು ಮಧುರೈ ಜಿಲ್ಲೆಯ ಸಂಧ್ಯಾ ಎಂಬಾಕೆಯನ್ನು ಮದುವೆಯಾಗಿದ್ದರು.ಸಂಧ್ಯಾ ಕಡೆಯಿಂದ ಕೆಲವರು ಮಾತ್ರ ಮದುವೆಯಲ್ಲಿ ಪಾಲ್ಗೊಂಡಿದ್ದರು.ಕೆಲವೇ ದಿನಗಳಲ್ಲಿ ಸಂಧ್ಯಾ ಧನಪಾಲ್ ಮನೆಯಿಂದ ಕಾಣೆಯಾಗಿದ್ದಳು.ಆಕೆಯ ಮೊಬೈಲ್ ಸಂಖ್ಯೆ ಮತ್ತು ಆಕೆಯ ಕೆಲವು ಸಂಬಂಧಿಕರನ್ನು ಸಂಪರ್ಕಿಸಲು ಧನಪಾಲ್ ಯತ್ನಿಸಿದ್ದರು. ಆದರೆ, ಎಲ್ಲಾ ಮೊಬೈಲ್ ಸಂಖ್ಯೆಗಳು ಸ್ವಿಚ್ ಆಫ್ ಆಗಿದ್ದವು.
ಮನೆಯಿಂದ ಸಂಧ್ಯಾ ಹಾಗೂ ಮನೆಯಲ್ಲಿನ ಆಭರಣಗಳು, ಬೆಲೆಬಾಳುವ ವಸ್ತುಗಳು ನಾಪತ್ತೆ ಬಗ್ಗೆ ಧನಪಾಲ್ ಪರಮತಿ ವೆಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದಾದ ಎರಡು ದಿನಗಳಲ್ಲಿ ಪರಮತಿ ವೆಲ್ಲೂರಿನಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರು ವಧುವಿನ ಹುಡುಕಾಟದಲ್ಲಿದ್ದಾಗ ಮತ್ತೊಬ್ಬ ಬ್ರೋಕರ್ ಸಂಧ್ಯಾಳನ್ನು ತೋರಿಸಿ ಆಕೆಯೊಂದಿಗೆ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇದು ತಿಳಿದ ಧನಪಾಲ್ ಸಂಧ್ಯಾರನ್ನು ಹಿಡಿಯಲು ಪೊಲೀಸರೊಂದಿಗೆ ಮದುವೆ ಮಂಟಪದಲ್ಲಿ ಕಾದು ಕುಳಿತಿದ್ದಾರೆ. ಮದುವೆಯಾಗಲು ಸಂಧ್ಯಾ ಹಾಗೂ ಆಕೆಯ ಸಂಬಂಧಿಕರಾದ ಅಯ್ಯಪ್ಪನ್, ಜಯವೇಲ್ ಮತ್ತು ಬ್ರೋಕರ್ ಧನಲಕ್ಷ್ಮಿ ಬರುತ್ತಿದ್ದಂತೆ ಎಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ.


