ಪುತ್ತೂರು: ರೈ ಎಸ್ಟೇಟ್ಸ್ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನ.8ರಂದು ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ‘ಅಶೋಕ ಜನಮನ-2026’ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ದೀಪಾವಳಿ ಉಡುಗೊರೆ ನೀಡಲಾಗುವುದು ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಈ ಬಾರಿ ಸಾರ್ವಜನಿಕರಿಗೆ ತಟ್ಟೆ, ಸೀರೆ ಹಾಗೂ ಬೆಡ್ಶೀಟ್ಗಳಲ್ಲಿ ಯಾವುದಾದರೂ ಒಂದು ಉಡುಗೊರೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕಾರ್ಯಕ್ರಮದ ಪೂರ್ವಭಾವಿಯಾಗಿ ಸೋಮವಾರ ಶಾಸಕರ ಕಚೇರಿ ಸಭಾಭವನದಲ್ಲಿ ನಡೆದ ರೈ ಎಸ್ಟೇಟ್ಸ್ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಮನೆಗೂ ಕಾರ್ಯಕ್ರಮದ ಆಮಂತ್ರಣ ನೀಡಲಾಗುತ್ತಿದ್ದು, ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅಶೋಕ್ ರೈ ಮನವಿ ಮಾಡಿದರು. ಟ್ರಸ್ಟ್ನ ಸದಸ್ಯರು ಗ್ರಾಮಗಳಿಗೆ ತೆರಳಿ ಪ್ರತಿಯೊಂದು ಕುಟುಂಬಕ್ಕೂ ವೈಯಕ್ತಿಕವಾಗಿ ಆಹ್ವಾನ ನೀಡಲಿದ್ದಾರೆ. ಜಾತಿ, ಧರ್ಮ ಹಾಗೂ ಪಕ್ಷಭೇದವಿಲ್ಲದೆ ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವದಿಸಬೇಕು ಎಂದು ಅವರು ಹೇಳಿದರು.
ಕಳೆದ 14 ವರ್ಷಗಳಿಂದ ದೀಪಾವಳಿ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಸಣ್ಣ ಮಟ್ಟದಲ್ಲಿ ಆರಂಭಗೊಂಡಿದ್ದ ಕಾರ್ಯಕ್ರಮ ಇದೀಗ ಲಕ್ಷಾಂತರ ಮಂದಿ ಭಾಗವಹಿಸುವ ಮಟ್ಟಕ್ಕೆ ಬೆಳೆದಿದ್ದು, ಸಾರ್ವಜನಿಕರ ಆಶೀರ್ವಾದ, ಸಲಹೆ ಹಾಗೂ ಸಹಕಾರವೇ ಇದಕ್ಕೆ ಕಾರಣವಾಗಿದೆ ಎಂದು ಅಶೋಕ್ ರೈ ತಿಳಿಸಿದರು.
ಕಾರ್ಯಕ್ರಮದ ಪ್ರಚಾರ ಹಾಗೂ ಆಹ್ವಾನಕ್ಕಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಟ್ರಸ್ಟ್ ಸದಸ್ಯರೊಂದಿಗೆ ಪಕ್ಷಭೇದ ಮರೆತು ಸ್ಥಳೀಯ ಗ್ರಾಮಸ್ಥರನ್ನೂ ಸಮಿತಿಗಳಲ್ಲಿ ಸೇರ್ಪಡೆಗೊಳಿಸಲಾಗಿದೆ. ಮಹಿಳಾ ಪ್ರಚಾರ ಸಮಿತಿಯನ್ನೂ ರಚಿಸಲಾಗಿದ್ದು, ಪ್ರತಿಯೊಂದು ದೇವಸ್ಥಾನ, ದೈವಸ್ಥಾನ, ಮಸೀದಿ ಹಾಗೂ ಚರ್ಚ್ಗಳಲ್ಲಿ ಕಾರ್ಯಕ್ರಮದ ಕುರಿತು ಪ್ರಚಾರ ನಡೆಸಲಾಗುವುದು.
ಜಾತಿ, ಮತ, ಧರ್ಮ ಹಾಗೂ ಪಕ್ಷಭೇದವಿಲ್ಲದೆ ಎಲ್ಲರನ್ನೂ ಒಳಗೊಂಡು ‘ಅಶೋಕ ಜನಮನ-2026’ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.


