ಕೋಲ್ಕತ: ಭಾರತೀಯ ಕ್ರಿಕೆಟ್ ತಂಡ ಮತ್ತು ಆರ್‌ಸಿಬಿಯ ಮಾಜಿ ವೇಗದ ಬೌಲರ್ ಅಶೋಕ್ ದಿಂಡಾ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಪ್ರಕಟಿಸಿದ್ದಾರೆ. ಇದರೊಂದಿಗೆ ಒಂದೂವರೆ ದಶಕದ ಅವರ ವೃತ್ತಿ ಜೀವನಕ್ಕೆ ತೆರೆ ಎಳೆದಂತಾಗಿದೆ.

ಪಶ್ಚಿಮ ಬಂಗಾಳದವರಾದ 36 ವರ್ಷದ ಅಶೋಕ್ ದಿಂಡಾ ಭಾರತ ಪರ 13 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 12 ಮತ್ತು 17 ವಿಕೆಟ್ ಕಬಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 116 ಪಂದ್ಯಗಳಲ್ಲಿ 420 ವಿಕೆಟ್ ಕಬಳಿಸಿದ್ದಾರೆ.
ದೇಶೀಯ ಕ್ರಿಕೆಟ್ ಋತುವಿನಲ್ಲಿ 15 ವರ್ಷಗಳ ಕಾಲ ಬಂಗಾಳ ತಂಡವನ್ನು ಪ್ರತಿನಿಧಿಸಿದ್ದ ದಿಂಡಾ, ಕಳೆದ ದೇಶೀಯ ಕ್ರಿಕೆಟ್ ಋತುವಿನ ವೇಳೆ ಬೌಲಿಂಗ್ ಕೋಚ್ ರಣದೇಬ್ ಬೋಸ್ ಜತೆ ಜಗಳವಾಡಿ ಬಂಗಾಳ ತಂಡದಿಂದ ಹೊರಬಿದ್ದಿರು. ಹಾಲಿ ಋತುವಿನಲ್ಲಿ ಗೋವಾ ತಂಡದ ಪರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ 3 ಪಂದ್ಯಗಳನ್ನು ಆಡಿದ್ದರು.

ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್, ಕೋಲ್ಕತ್ತಾ ನೈಟ್‌ರೈಡರ್ಸ್, ಪುಣೆ ವಾರಿಯರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಲ್ಲಿಯೂ ದಿಂಡಾ ಆಡಿದ್ದರು. ಐಪಿಎಲ್‌ನ 78 ಇನ್ನಿಂಗ್ಸ್‌ಗಳಲ್ಲಿ 68 ವಿಕೆಟ್ ಪಡೆದಿದ್ದಾರೆ. 18 ರನ್ ನೀಡಿ 4 ವಿಕೆಟ್ ಕಬಳಿಸಿರುವುದು ಐಪಿಎಲ್‌ನಲ್ಲಿ ಇವರ ಶ್ರೇಷ್ಠ ಸಾಧನೆಯಾಗಿದೆ.

ಐಪಿಎಲ್ ಪಂದ್ಯಗಳಲ್ಲಿ ದುಬಾರಿ ರನ್ ನೀಡುತ್ತಿದ್ದ ಕಾರಣಕ್ಕಾಗಿ ಅಶೋಕ್ ದಿಂಡಾ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ಗಳನ್ನೂ ಎದುರಿಸಿದ್ದರು. ಈಗಲೂ ಐಪಿಎಲ್‌ನಲ್ಲಿ ದುಬಾರಿ ರನ್ ನೀಡುವ ಬೌಲರ್‌ಗಳನ್ನು ‘ದಿಂಡಾ ಅಕಾಡೆಮಿ’ಯ ಸದಸ್ಯರು ಎಂದೇ ಟ್ರೋಲ್ ಮಾಡಲಾಗುತ್ತದೆ.