
ಮಂಗಳೂರು: ಜರ್ಮನಿಯ ಬರ್ಲಿನ್ನಲ್ಲಿ ಅಕ್ಟೋಬರ್ ೧೧ ರಿಂದ ೧೩ ರವರೆಗೆ ನಡೆದ ಜಾಗತಿಕ ವಿಶ್ವ ಆರೋಗ್ಯ ಶೃಂಗಸಭೆ ೨೦೨೬ರಲ್ಲಿ ಮಂಗಳೂರಿನ ಆ್ಯಂಟಿ ಪೋಲ್ಯೂಷನ್ ಡ್ರೆöÊವ್ ಫೌಂಡೇಶನ್ (ಎಪಿಡಿ ಪ್ರತಿಷ್ಠಾನ) ಸಂಸ್ಥೆಯು ಸಕ್ರಿಯವಾಗಿ ಭಾಗವಹಿಸಿ, ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುತ್ತಿರುವ ಹೊರಾಂಗಣ ಕಾರ್ಮಿಕರು ಎದುರಿಸುತ್ತಿರುವ ತೀವ್ರ ಆರೋಗ್ಯ ಅಪಾಯಗಳ ಕುರಿತು ಜಾಗತಿಕ ಗಮನ ಸೆಳೆದಿದೆ.
ಶೃಂಗಸಭೆಯಲ್ಲಿ ಭಾಗವಹಿಸಿದ ಎಪಿಡಿ ಪ್ರತಿಷ್ಠಾನದ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಬ್ದುಲ್ಲಾ ಎ. ರೆಹಮಾನ್ ಅವರು, ವಿಶ್ವ ಆರೋಗ್ಯ ಸಂಸ್ಥೆಯ (WHO) ಮಹಾನಿರ್ದೇಶಕ ಡಾ. ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್, ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಚಿಕ್ವೆ ಇಹೆಕ್ವಿಯಾಜು ಹಾಗೂ ನ್ಯೂಜಿಲೆಂಡ್ನ ಮಾಜಿ ಪ್ರಧಾನಿ ಹೆಲೆನ್ ಕ್ಲಾರ್ಕ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಗಣ್ಯರೊಂದಿಗೆ ಮಹತ್ವದ ಚರ್ಚೆ ನಡೆಸಿದರು.

ಸಾವುಗಳ ಪ್ರಮಾಣ ಮತ್ತು ವಾಸ್ತವ ಸ್ಥಿತಿ: ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ILO) ಅಂದಾಜಿನ ಪ್ರಕಾರ ಜಗತ್ತಿನಾದ್ಯಂತ ೧೬೦ ಕೋಟಿ ಜನರು ಹೊರಾಂಗಣದಲ್ಲಿ ದುಡಿಯುತ್ತಿದ್ದಾರೆ. ಕೆಲಸದ ಸಮಯದಲ್ಲಿ ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಪ್ರತಿವರ್ಷ ಸುಮಾರು ೮,೬೦,೦೦೦ ಸಾವುಗಳು ಸಂಭವಿಸುತ್ತಿವೆ. ಆದಾಗ್ಯೂ, ಪ್ರತಿದಿನ ರಸ್ತೆಗಳಲ್ಲೇ ದುಡಿಯುವ ಸಂಚಾರ ಪೊಲೀಸರು, ವಾಹನ ಚಾಲಕರು, ಬೀದಿ ವ್ಯಾಪಾರಿಗಳು, ವಿತರಣಾ ಸಿಬ್ಬಂದಿ ಹಾಗೂ ನಿರ್ಮಾಣ ಕಾರ್ಮಿಕರು ಎದುರಿಸುತ್ತಿರುವ ಆರೋಗ್ಯ ಹಾನಿಗೆ ಸೂಕ್ತ ಗಮನ ದೊರೆಯುತ್ತಿಲ್ಲ ಎಂದು ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಕರ್ನಾಟಕದ ಪ್ರಮುಖ ಅಧ್ಯಯನ ವರದಿ: ಎಪಿಡಿ ಪ್ರತಿಷ್ಠಾನವು ತನ್ನ ‘ಶುದ್ಧ ಗಾಳಿ’ ಉಪಕ್ರಮದಡಿ ಕರ್ನಾಟಕದಲ್ಲಿ ನಡೆಸಿದ ಆರೋಗ್ಯ ತಪಾಸಣೆಗಳ ವರದಿಯನ್ನು ಶೃಂಗಸಭೆಯಲ್ಲಿ ಹಂಚಿಕೊಂಡಿದೆ:
- ಬೆಂಗಳೂರು: ತಪಾಸಣೆಗೊಳಪಟ್ಟ ೨೩೫ ಸಂಚಾರ ಪೊಲೀಸ್ ಸಿಬ್ಬಂದಿಯಲ್ಲಿ ಸುಮಾರು ಶೇ. ೩೧ರಷ್ಟು ಮಂದಿಯಲ್ಲಿ ಶ್ವಾಸಕೋಶದ ಕಾರ್ಯಕ್ಷಮತೆ ಕುಸಿದಿರುವುದು ಕಂಡುಬಂದಿದೆ.
- ಮಂಗಳೂರು: ೫೧೦ ಆಟೋರಿಕ್ಷಾ ಚಾಲಕರು ಹಾಗೂ ಸಂಚಾರ ಪೋಲಿಸ್ ಸಿಬ್ಬಂದಿಯ ಉಸಿರಾಟದ ಆರೋಗ್ಯ ಮೌಲ್ಯಮಾಪನ ಮಾಡಲಾಗಿದ್ದು, ಮಾಲಿನ್ಯಪೀಡಿತ ವಾತಾವರಣದಲ್ಲಿ ದೀರ್ಘಕಾಲ ಕೆಲಸ ಮಾಡುವವರಿಗೆ ಶ್ವಾಸಕೋಶದ ವಿಶೇಷ ಆರೈಕೆಯ ಅಗತ್ಯವಿರುವುದು ದೃಢಪಟ್ಟಿದೆ.
ಶೃಂಗಸಭೆಯ ಪ್ರಮುಖ ಸಮಾಲೋಚನೆಗಳು: ಸಮಾವೇಶದ ಜೊತೆಗೆ ನಡೆದ “ಹವಾಮಾನ ಮತ್ತು ಆರೋಗ್ಯ: ಆಶಯದಿಂದ ಹೂಡಿಕೆಯವರೆಗೆ” ಎಂಬ ದುಂಡುಮೇಜಿನ ಸಭೆಯಲ್ಲೂ ರೆಹಮಾನ್ ಭಾಗವಹಿಸಿ, ಪ್ರಾಯೋಗಿಕ ಕ್ರಮಗಳ ಕುರಿತು ಚರ್ಚಿಸಿದರು. ಇದೇ ವೇಳೆ ಬ್ರಿಟನ್ ಮೂಲದ ಜಾಗತಿಕ ಜಾಲ ‘ಆಕ್ಷನ್ ಫಾರ್ ಗ್ಲೋಬಲ್ ಹೆಲ್ತ್’ ಜೊತೆ ಸಂಭಾವ್ಯ ಸಹಭಾಗಿತ್ವದ ಕುರಿತು ಮಾತುಕತೆ ನಡೆಸಲಾಯಿತು.
ಸಂಸ್ಥೆಯ ಸಿಇಒ ಅಬ್ದುಲ್ಲಾ ಎ. ರೆಹಮಾನ್ ಮಾತನಾಡಿ, “ಯಾರಾದರೂ ರೋಗಿಯಾದ ನಂತರವಷ್ಟೇ ಆರೋಗ್ಯಕ್ಕೆ ಆದ್ಯತೆ ನೀಡುವುದಲ್ಲ. ಲಕ್ಷಾಂತರ ಜನರು ರಸ್ತೆಗಳಲ್ಲೇ ತಮ್ಮ ಕೆಲಸದ ಜೀವನ ಕಳೆಯುತ್ತಿದ್ದು, ಪ್ರತಿದಿನ ಗಂಭೀರ ಪರಿಸರ ಅಪಾಯ ಎದುರಿಸುತ್ತಿದ್ದಾರೆ. ಸಾರ್ವಜನಿಕ ಆರೋಗ್ಯ ಯೋಜನೆಗಳಲ್ಲಿ ಇವರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು” ಎಂದು ಒತ್ತಾಯಿಸಿದರು.

ಮುಂದಿನ ದಿನಗಳಲ್ಲಿ ಪರಿಸರ ಹಾಗೂ ಸಾರ್ವಜನಿಕ ಆರೋಗ್ಯ ನೀತಿಗಳಲ್ಲಿ ಹೊರಾಂಗಣ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಆದ್ಯತೆ ದೊರೆಯುವಂತೆ ಮಾಡಲು ಸಂಶೋಧನಾ ಸಹಯೋಗಗಳನ್ನು ಮುಂದುವರಿಸುವುದಾಗಿ ಎಪಿಡಿ ಪ್ರತಿಷ್ಠಾನ ತಿಳಿಸಿದೆ.


