Monday, May 20, 2024
Homeಕರಾವಳಿಚಿಕ್ಕಮಗಳೂರು ಪೊಲೀಸರ ಕಾರ್ಯಾಚರಣೆ: ನಕಲಿ ನೋಟು ದಂಧೆಕೋರರಿಂದ 1 ಕೋಟಿ ರೂ. ಮೌಲ್ಯದ ಪುರಾತನ ರತ್ನ...

ಚಿಕ್ಕಮಗಳೂರು ಪೊಲೀಸರ ಕಾರ್ಯಾಚರಣೆ: ನಕಲಿ ನೋಟು ದಂಧೆಕೋರರಿಂದ 1 ಕೋಟಿ ರೂ. ಮೌಲ್ಯದ ಪುರಾತನ ರತ್ನ ವಶ!

spot_img
- Advertisement -
- Advertisement -

ಚಿಕ್ಕಮಗಳೂರು: ಕಳೆದೊಂದು ವರ್ಷದ ಹಿಂದೆ ಜಿಲ್ಲೆಯ ಆಲ್ದೂರು ಠಾಣೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಇಬ್ಬರು ನಕಲಿ ನೋಟು ದಂಧೆಕೋರರನ್ನು ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇವರಿಂದ ಶಿವಮೊಗ್ಗದಲ್ಲಿ ಅಪಹರಿಸಿದ್ದ ಸುಮಾರು ಒಂದು ಕೋಟಿ ರೂ.ಮೌಲ್ಯದ ಅಪೂರ್ವ ರತ್ನವನ್ನೂ ವಶಪಡಿಸಿಕೊಂಡಿದ್ದಾರೆ.

ನಗರದ ಸೈಬರ್ ಠಾಣೆಯ ಇನ್ಸ್‍ಪೆಕ್ಟರ್ ಎ.ಕೆ.ರಕ್ಷಿತ್ ಮತ್ತು ತಂಡದವರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು,510.60 ಕ್ಯಾರೆಟ್ ಪ್ರಮಾಣೀಕೃತ ಪುರಾತನ (ಕ್ಯಾಟ್-ಐ) ರತ್ನದ ಗುಂಡನ್ನು ವಶಪಡಿಸಿಕೊಂಡಿದ್ದಾರೆ.

ಈ ರತ್ನವನ್ನು ಆರೋಪಿಗಳು 2019 ರಲ್ಲಿ ಶಿವಮೊಗ್ಗದಲ್ಲಿ ಓರ್ವ ಅಜ್ಜನಿಂದ ಖರೀದಿಸುವುದಾಗಿ ಮೋಸ ಮಾಡಿ ತೆಗೆದುಕೊಂಡು ಹೋಗಿದ್ದರು. ಈ ರತ್ನವನ್ನು ಶಿವಮೊಗ್ಗದಲ್ಲಿರುವ ಅಜ್ಜನಿಗೆ ಹಲವು ವರ್ಷಗಳ ಹಿಂದೆ ಓರ್ವ ಮಹಾರಾಜ ನೀಡಿದ್ದರು ಎಂದು ಹೇಳಲಾಗಿದೆ. ಈ ಕುರಿತು ಶಿವಮೊಗ್ಗ ಜಿಲ್ಲೆಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇದರ ಅಂದಾಜು ಬೆಲೆ ರೂ. 50 ಲಕ್ಷ ದಿಂದ 1 ಕೋಟಿ ಆಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿರುತ್ತಾರೆ.

ಬಂಧಿಸಿರುವ ಆರೋಪಿಗಳ ಪೈಕಿ ಒಬ್ಬನ ವಿರುದ್ಧ ಮಂಗಳೂರು ವಿಟ್ಲ ಪೊಲೀಸ್ ಠಾಣೆಯಲ್ಲಿ ಹಲ್ಲೇ, ಕಳ್ಳತನ ಸೇರಿ 6 ಪ್ರಕರಣಗಳು ದಾಖಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ಆರೋಪಿಗಳು ನಾಯಿಗಳಿಗೆ ವಿಷಹಾಕಿ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದು, ಕೇರಳದಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದರು. ಮೈಸೂರು, ಹಾಸನ ಜಿಲ್ಲಾಗಳಲ್ಲಿ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ ಈವರೆಗೆ ಒಟ್ಟು 5.57 ಲಕ್ಷ ಮೌಲ್ಯದ 500 ರು. ಮುಖಬೆಲೆಯ ನಕಲಿ ನೋಟುಗಳು, 5000 ರು. ನಗದು, 3 ಕಾರು, 5 ಮೊಬೈಲ್‌, ನಕಲಿ ನೋಟುಗಳ ಮುದ್ರಣಕ್ಕೆ ಬಳಸುತ್ತಿದ್ದ ಪ್ರಿಂಟ್, ಪೆನ್‌ ಡ್ರೈವ್‌ಗಳು, ಪೇಪರ್‌, ಮುದ್ರಣ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಪಶ್ಚಿಮ ವಲಯ ಐಜಿಪಿ ಬಹುಮಾನ ಘೋಷಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ.ಅಕ್ಷಯ್ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!