ಕೋಲ್ಕತ್ತಾ : ನಿನ್ನೆ ಮಧ್ಯಾಹ್ನ ಅಪ್ಪಳಿಸಿದ ಅಂಪನ್ ಚಂಡಮಾರುತ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳನ್ನು ನಡುಗಿಸಿ ಹೋಗಿದೆ. ಗಂಟೆಗೆ 190 ಕಿಮೀ ವೇಗದಲ್ಲಿ ದಾಂಗುಡಿ ಇಟ್ಟ ಅತ್ಯಂತ ತೀವ್ರಮಟ್ಟದ ಚಂಡಮಾರುತದ ದಾಳಿಯಿಂದ 72 ಮಂದಿ ಸಾವನ್ನಪ್ಪಿದ್ದಾರೆ ಅಂತ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ಪೈಕಿ 17 ಜನರು ಕೋಲ್ಕತ್ತಾದವರು ಎನ್ನಲಾಗಿದೆ. ಘಟನೆಯಲ್ಲಿ ಮೃತಪಟ್ಟವರೆಲ್ಲರೂ ಮರ ಮತ್ತು ಮನೆ ಕುಸಿತ ಮತ್ತು ವಿದ್ಯುದಾಘಾತಕ್ಕೆ ಬಲಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅಲ್ಲದೆ ಸೈಕ್ಲೋನ್ ಆರ್ಭಟದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ 2.5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಕೊರೋನಾ ವೈರಸ್ನಿಂದ ಆದ ಹಾನಿಗಿಂತಲೂ ಚಂಡಮಾರುತ ಹೆಚ್ಚು ಘಾಸಿ ಮಾಡಿದೆ ಎಂದು ಅವರು ಹೇಳಿದ್ದಾರೆ. ಅಷ್ಟಕ್ಕೂ ಸಾವಿನ ಸಂಖ್ಯೆಯಿಂದ ಕೊರೋನಾ ಮತ್ತು ಚಂಡಮಾರುತದ ಮಧ್ಯೆ ಹೋಲಿಕೆ ಸಾಧ್ಯವಿಲ್ಲ. ಚಂಡಮಾರುತ ಸಾಕಷ್ಟು ಆಸ್ತಿಪಾಸ್ತಿ ನಾಶ ಮಾಡಿದೆ. ಜನಜೀವನವನ್ನು ಅಕ್ಷರಶಃ ಚೆಲ್ಲಾಪಿಲ್ಲಿಯಾಗಿಸಿದೆ. ಬದುಕು ಕಟ್ಟಿಕೊಳ್ಳಲು ಹಲವು ಕಾಲವೇ ಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಕೊರೋನಾದಿಂದ ಪಶ್ಚಿಮ ಬಂಗಾಳದಲ್ಲಿ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೂ ಚಂಡಮಾರುತದಿಂದ ಆದ ಘಾಸಿಯೇ ಹೆಚ್ಚು ಮಾರಕ ಎಂಬ ಅಭಿಪ್ರಾಯ ಇದೆ.
ಚಂಡಮಾರುತ ಅಪ್ಪಳಿಸುವ ಮುನ್ಸೂಚನೆ ಇದ್ದದ್ದರಿಂದ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಮುಂಚಿತವಾಗಿಯೇ ಸುಮಾರು 6.58 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿತ್ತು. ಅತ್ತ ಬಂಗಾಳದಲ್ಲಂತೂ ಬರೋಬ್ಬರಿ 24 ಲಕ್ಷ ಮಂದಿಯನ್ನು 15,000 ಪ್ರವಾಹ ಕೇಂದ್ರಗಳಿಗೆ ಸೇರಿಸಲಾಗಿತ್ತು.
ಮಯನ್ಮಾರ್ನಿಂದ ವಲಸೆ ಬಂದು ಪ್ರವಾಹಪೀಡಿತ ಪ್ರದೇಶಗಳಲ್ಲಿದ್ದ ರೋಹಿಂಗ್ಯ ಮುಸ್ಲಿಮ್ ಸಮುದಾಯದ ಸಂತ್ರಸ್ತರನ್ನೂ ಪ್ರವಾಹ ಕೇಂದ್ರಗಳಿಗೆ ಸಾಗಿಸಿ ಪ್ರಾಣ ರಕ್ಷಣೆ ಮಾಡಲಾಗಿತ್ತು. ಬಾಂಗ್ಲಾ ಸರ್ಕಾರ ಈ ಕ್ರಮ ಕೈಗೊಳ್ಳದೇ ಹೋಗಿದ್ದರೆ ಜೀವಹಾನಿ ಸಾಕಷ್ಟು ಆಗಿರುತ್ತಿತ್ತು.