
ಬೆಳ್ತಂಗಡಿ: ಭಾರೀ ಮಳೆಯಿಂದಾಗಿ ಲಾಯಿಲ ಗ್ರಾಮದ ಪುತ್ರಬೈಲು, ಗುರಿಂಗಾನ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸೋಮಾವತಿ ನದಿ ಉಕ್ಕಿ ಹರಿದು ಹಲವು ಮನೆಗಳು ಜಲಾವೃತಗೊಂಡು ಹಾನಿಗೊಳಗಾದ ಹಿನ್ನೆಲೆಯಲ್ಲಿ ಆಗಸ್ಟ್ 5ರಂದು ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.ಈ ಸಂದರ್ಭದಲ್ಲಿ ಗುರಿಂಗಾನ ರಸ್ತೆಯಲ್ಲಿ ಹಲವು ವರ್ಷಗಳಿಂದ ಬೀದಿ ದೀಪಗಳ ಕೊರತೆಯಿದ್ದು, ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಬೇಡಿಕೆ ಈಡೇರಿಲ್ಲ ಎಂದು ಸ್ಥಳೀಯರು ಸಚಿವ ಯು.ಟಿ. ಖಾದರ್ ಹಾಗೂ ರಕ್ಷಿತ್ ಶಿವರಾಂ ಅವರ ಗಮನಕ್ಕೆ ತಂದರು.
ಸ್ಥಳೀಯರ ಸಮಸ್ಯೆಯನ್ನು ಆಲಿಸಿದ ಸಚಿವರು, ಲಾಯಿಲ ಗ್ರಾಮ ಪಂಚಾಯತ್ ಪಿಡಿಒ ತಾರನಾಥ್ ಅವರಿಗೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇದೇ ವೇಳೆ ರಕ್ಷಿತ್ ಶಿವರಾಂ ಅವರು ಬೀದಿ ದೀಪಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.ಸಚಿವರ ಸೂಚನೆ ಹಾಗೂ ರಕ್ಷಿತ್ ಶಿವರಾಂ ಅವರ ಪ್ರಯತ್ನಕ್ಕೆ ತಕ್ಷಣ ಸ್ಪಂದಿಸಿದ ಲಾಯಿಲ ಗ್ರಾಮ ಪಂಚಾಯತ್, ಕಂಬಗಳಲ್ಲಿ ಈಗಾಗಲೇ ಇದ್ದ ಎಚ್‌ಟಿ ವಿದ್ಯುತ್ ಲೈನ್‌ಗೆ ಎಲ್‌ಟಿ ವಿದ್ಯುತ್ ಸಂಪರ್ಕ ಕಲ್ಪಿಸಿ ಗುರಿಂಗಾನ ರಸ್ತೆ ಬದಿಯಲ್ಲಿ ಹೊಸ ಬೀದಿ ದೀಪಗಳನ್ನು ಆ.110 ರಂದು ಅಳವಡಿಸಿದೆ. ಇದರಿಂದ ಹಲವು ವರ್ಷಗಳಿಂದ ಗ್ರಾಮಸ್ಥರು ಎದುರು ನೋಡುತ್ತಿದ್ದ ಬೇಡಿಕೆ ಈಡೇರಿದಂತಾಗಿದೆ.
ಬೀದಿ ದೀಪಗಳ ಕೊರತೆಯಿಂದ ರಾತ್ರಿ ವೇಳೆ ವಿದ್ಯಾರ್ಥಿಗಳು, ಮಹಿಳೆಯರು, ಸಾರ್ವಜನಿಕರು ಹಾಗೂ ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಇದೀಗ ಹೊಸ ಬೀದಿ ದೀಪಗಳ ಅಳವಡಿಕೆಯಿಂದ ರಾತ್ರಿ ಸಂಚಾರಕ್ಕೆ ಅನುಕೂಲವಾಗುವುದರ ಜೊತೆಗೆ ಸಾರ್ವಜನಿಕರ ಸುರಕ್ಷತೆಯೂ ಹೆಚ್ಚಲಿದೆ.
ಬಹುವರ್ಷಗಳ ಬೇಡಿಕೆಗೆ ಸ್ಪಂದಿಸಿ ತ್ವರಿತವಾಗಿ ಕ್ರಮ ಕೈಗೊಂಡ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹಾಗೂ ರಕ್ಷಿತ್ ಶಿವರಾಂ ಅವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ನಮ್ಮ ರಸ್ತೆಯ ಬದಿಯಲ್ಲಿ ಬೀದಿ ದೀಪಗಳು ಬೆಳಗಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಬೆಂಬಲಿತ ಸದಸ್ಯರನ್ನು ಮತ ಹಾಕಿ ಗೆಲ್ಲಿಸಿದರೂ ನಮ್ಮ ಸಮಸ್ಯೆಗೆ ಸ್ಪಂದನೆ ದೊರೆತಿರಲಿಲ್ಲ. ಇದೀಗ ಉಸ್ತುವಾರಿ ಸಚಿವರು ಹಾಗೂ ರಕ್ಷಿತ್ ಶಿವರಾಂ ಅವರು ಸಮಸ್ಯೆಯನ್ನು ಗಮನಕ್ಕೆ ತೆಗೆದುಕೊಂಡು ಕ್ರಮ ಕೈಗೊಂಡ ಬಳಿಕ ನಮ್ಮ ಬೇಡಿಕೆ ಈಡೇರಿದೆ. ಅವರ ಕಾರ್ಯಕ್ಕೆ ನಾವು ಕೃತಜ್ಞರಾಗಿದ್ದೇವೆ,” ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.


