ಕೊರೊನಾ ಲಾಕ್‌ಡೌನ್ ಬೇಗನೆ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಸರ್ಕಾರ, ಇನ್ನೇನು ನಿಯಮ ಸಡಿಲಿಸಬಹುದು ಎಂದು ಕೊಳ್ಳುತ್ತಿದ್ದಂತೆ, ಮತ್ತೇನಾದರೂ ಅವಾಂತರ ಆಗಿ ಲಾಕ್‌ಡೌನ್ ಇನ್ನಷ್ಟು ಕಠಿಣವಾಗುತ್ತಿದೆ.
ಶುಭ ಸಮಾರಂಭವಿರಲಿ, ಮತ್ತೊಂದಿರಲಿ ಸರ್ಕಾರದ ಆದೇಶವನ್ನು ಗೌರವಿಸಲೇ ಬೇಕು, ಕೆಲವರ ಸಂತಸಕ್ಕೆ ಕೊರೊನಾ ಜಾಗೃತಿಯನ್ನು ಕಡೆಗಣಿಸುವುದು ತರವಲ್ಲ. ಇದೇ ಕಾರಣಕ್ಕೆ ಕನ್ನಡದ ಪ್ರತಿಭಾವಂತ ಖಳನಟರಲ್ಲೊಬ್ಬರೆಂದು ಗುರುತಿಸಲಾಗುವ ರಾಜ್ ದೀಪಕ್ ಶೆಟ್ಟಿ ತಮ್ಮ ವಿವಾಹ ಸಮಾರಂಭವನ್ನು ಮುಂದೂಡಿದ್ದಾರೆ. ರಾಜ್ ದೀಪಕ್ ಶೆಟ್ಟಿ ಅವರ ವಿವಾಹವು ಸೋನಿಯಾ ರಾಡ್ರಿಗೋಸ್ ಅವರೊಟ್ಟಿಗೆ ಮೇ 17 ಕ್ಕೆ ನಿಗದಿಯಾಗಿತ್ತು, ಆದರೆ ಕೊರೊನಾ ಕಾರಣದಿಂದಾಗಿ ಮದುವೆಯನ್ನು ಮುಂದೂಡಿದ್ದಾರೆ.
ರಾಜ್ ದೀಪಕ್ ಶೆಟ್ಟಿ ಅವರು ಕೈಹಿಡಿಯಲಿರುವ ಸೋನಿಯಾ ರಾಡ್ರಿಗಸ್ ಅವರು ಇವೆಂಟ್ ಆರ್ಗನೈಸರ್ ಆಗಿದ್ದು, ಮಂಗಳೂರು ಫ್ಯಾಷನ್ ವೀಕ್‌ನ ಮಾಲಕಿ ಆಗಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ವಿವಾಹ ಸಮಾರಂಭ ಇಟ್ಟುಕೊಳ್ಳುವ ಯೋಚನೆ ಮಾಡಿದ್ದು, ಅಕ್ಟೋಬರ್ 18 ರಂದು ಅವರ ಹುಟ್ಟುಹಬ್ಬದ ದಿನವೇ ಗೃಹಸ್ಥಾಶ್ರಮಕ್ಕೆ ಕಾಲಿಡುವ ಚಿಂತನೆಯಲ್ಲಿದ್ದಾರೆ. ಸಿನಿಮಾ ಚಿತ್ರೀಕರಣ ಬಂದ್ ಆಗಿರುವ ಕಾರಣ ಮಂಗಳೂರಿನ ಸ್ವಗೃಹದಲ್ಲಿ ಕುಟುಂಬದೊಂದಿಗೆ ಅವರು ಕಾಲಕಳೆಯುತ್ತಿದ್ದಾರೆ. ತಮ್ಮ ಕೈಲಾದ ಮಟ್ಟಿಗೆ ಸ್ಥಳೀಯವಾಗಿ ಸೇವೆ ಮತ್ತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವುದಾಗಿ ಹೇಳಿದ್ದಾರೆ.
ಅಂತರ್ ಧರ್ಮಿಯ ಪ್ರೀತಿ, ವಿವಾಹ..!
ರಾಜ್ ದೀಪಕ್- ಸೋನಿಯಾ ರಾಡ್ರಿಗಸ್.. ಇಬ್ಬರದ್ದೂ ಫೇಸ್ ಬುಕ್ನಿಂದ ಶುರುವಾದ ಗೆಳೆತನ. ಸೋನಿಯಾ ಈವೆಂಟ್ ಮ್ಯಾನೇಜ್ಮೆಂಟ್ ಒಂದರ ಓನರ್ ಆಗಿದ್ದಾರೆ. ಮೂರು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದು, ಅಂತರ್ ಧರ್ಮಿಯರಾದರೂ ಯಾವುದೇ ಹಿಂಜರಿಕೆಯಿಲ್ಲದೇ ಮದುವೆಗೆ ಒಪ್ಪಿದ್ದರು. ಮೇ 10 ನಿಶ್ಚಿತಾರ್ಥ, ಮೇ 17 ರಂದು ಮದುವೆ ನಿಶ್ಚಯವಾಗಿತ್ತು. ಆದರೆ ಕೊರೊನಾ ಭೀತಿ ಇರೋದ್ರಿಂದ ಮದುವೆಯನ್ನು ಮುಂದಕ್ಕೆ ಹಾಕಿದ್ದಾರೆ.