ಮಂಗಳೂರು: ವಿದ್ಯಾರ್ಥಿಯೊಬ್ಬ ಅತೀ ವೇಗವಾಗಿ ಬೈಕ್ ಚಲಾಯಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಮಾಣ ವಿದ್ಯುತ್ ಕಂಬ ತುಂಡಾಗಿ ಬಿದ್ದು ಸವಾರರಿಬ್ಬರು ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಘಟನೆ ಉಳ್ಳಾಲ ತಾಲೂಕಿನ ಕಿನ್ಯ ಸಂಕೇಶ ಎಂಬಲ್ಲಿ ನಡೆದಿದೆ.
ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಬೈಕಿನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಬಿಜಾಪುರ ಮೂಲದವರು ಎಂದು ಗುರುತಿಸಲಾಗಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ನೇರವಾಗಿ ಬಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದ್ದು ಇದರ ರಭಸಕ್ಕೆ ಕಂಬ ಕಡ್ಡಿ ಮುರಿದು ಬಿದ್ದಂತೆ ತುಂಡಾಗಿ ಬಿದ್ದಿದೆ.
ಡಿಕ್ಕಿಯಾಗುತ್ತಲೇ ಕಂಬ ರಸ್ತೆಗೆ ಬಿದ್ದಿದ್ದು ಮಧ್ಯದಲ್ಲಿ ವಿದ್ಯುತ್ ತಂತಿಯೂ ಬಿದ್ದಿದೆ. ಕೂಡಲೇ ಜನ ಸೇರಿದರೂ ಕರೆಂಟ್ ಇದೆಯೆಂಬ ಭಯದಲ್ಲಿ ಹತ್ತಿರ ಹೋಗಲಿಲ್ಲ. ಇಬ್ಬರು ಸವಾರರು ಕೂಡ ರಸ್ತೆಗೆ ಬಿದ್ದು ಒಂದಷ್ಟು ಹೊತ್ತು ಹೊರಳಾಡಿದ್ದಾರೆ. ಆದರೆ ಕಂಬ ಉರುಳುತ್ತಲೇ ವಿದ್ಯುತ್ ಲೈನ್ ಕಟ್ ಆಗಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಮೆಸ್ಕಾಂ ಇಲಾಖೆಯವರು ಕೇಸು ಮಾಡಿದ್ದಾರೆ.


