ಮಂಗಳೂರು: ಕುದ್ರೋಳಿ ದೇವಸ್ಥಾನದ ಬಳಿ ವಾಸವಿರುವ ರಾಜಸ್ಥಾನಿ ಕುಟುಂಬದ ವ್ಯಕ್ತಿಯೊಬ್ಬರಿಗೆ ಗುರುವಾರ ರಾತ್ರಿ ಹೃದಯಾಘಾತ ಸಂಭವಿಸಿದ್ದು, ಭಾರೀ ಜನದಟ್ಟಣೆ ಹಾಗೂ ವಾಹನ ಸಂಚಾರದ ನಿರ್ಬಂಧದಿಂದಾಗಿ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ತೀವ್ರ ಪರದಾಟ ನಡೆಸಬೇಕಾಯಿತು.
ಕುದ್ರೋಳಿಯಲ್ಲಿ ನಡೆಯುತ್ತಿರುವ ದಸರಾ ಉತ್ಸವಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಮಿಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಜನದಟ್ಟಣೆ ಹಾಗೂ ಭದ್ರತಾ ವ್ಯವಸ್ಥೆಯಿಂದಾಗಿ ಹೃದಯಾಘಾತಕ್ಕೊಳಗಾದ ವ್ಯಕ್ತಿಯನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರ ಪುತ್ರ ಮತ್ತು ಸಹೋದರಿ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಪಕ್ಕದ ರಸ್ತೆಯವರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಸ್ಥಳೀಯ ವೈದ್ಯರೊಬ್ಬರು ತುರ್ತಾಗಿ ಸ್ಪಂದಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಮಧ್ಯರಾತ್ರಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆ ಹಿನ್ನೆಲೆಯಲ್ಲಿ ನಗರದ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಅವರು ತುರ್ತು ನಿರ್ಗಮನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಪತ್ರ ಬರೆದಿದ್ದಾರೆ. ದಸರಾ ಉತ್ಸವದ ಸಂದರ್ಭದಲ್ಲಿ ಕುದ್ರೋಳಿ ಪರಿಸರದಲ್ಲಿ ಪ್ರತಿದಿನ ಸಂಜೆ ಭಾರೀ ಜನದಟ್ಟಣೆ ಉಂಟಾಗುತ್ತಿದ್ದು, ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರಕ್ಕೂ ಅವಕಾಶವಿಲ್ಲದಂತಾಗಿದೆ. ಇಂತಹ ಸಂದರ್ಭಗಳಲ್ಲಿ ತುರ್ತು ಆರೋಗ್ಯ ಸಮಸ್ಯೆ ಅಥವಾ ಇತರ ಅವಘಡಗಳು ಸಂಭವಿಸಿದರೆ ಸಂತ್ರಸ್ತರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಕಷ್ಟವಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನಗಳು ಸೇರಿದಂತೆ ಜನರು ಸೇರುವ ಉತ್ಸವ ಮತ್ತು ಕಾರ್ಯಕ್ರಮಗಳ ಸ್ಥಳಗಳಲ್ಲಿ ತುರ್ತು ನಿರ್ಗಮನ ದ್ವಾರಗಳನ್ನು ಕಡ್ಡಾಯವಾಗಿ ವ್ಯವಸ್ಥೆ ಮಾಡಬೇಕು. ಕನಿಷ್ಠ ಆಂಬುಲೆನ್ಸ್ಗಳ ಸಂಚಾರಕ್ಕಾದರೂ ಅವಕಾಶ ಕಲ್ಪಿಸಬೇಕು. ಜನರು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಡಾ. ಪದ್ಮನಾಭ ಕಾಮತ್ ಅವರು ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ದೇವಸ್ಥಾನ ಸಮಿತಿ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ತುರ್ತಾಗಿ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.


