ಮುಂಬೈ: ಮಹಾರಾಷ್ಟ್ರದ ಪಾಲ್ಗಾರ್‌ನ ಮುರ್ಬೆಯ ಮೀನುಗಾರ ಚಂದ್ರಕಾಂತ್ ತಾರೆ ಎಂಬವರು ಹಿಡಿದಿದ್ದ ಅಪರೂಪದ ಮೀನುಗಳು ಅವರನ್ನು ಕೋಟ್ಯಧಿಪತಿಯನ್ನಾಗಿಸಿದೆ.
ಅವರು ಹಿಡಿದ ಅಪರೂಪದ ಮೀನು ಅವರಿಗೆ ಲಕ್ಷ್ಮೀ ಕಟಾಕ್ಷವನ್ನು ತಂದು ಕೊಟ್ಟಿದ್ದು , ಆಗಸ್ಟ್ 15 ರ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿ ತಾರೆ ಅವರು ತನ್ನ 10 ಸಿಬ್ಬಂದಿಯೊಂದಿಗೆ ಅರೇಬಿಯನ್ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು.
ಮಹಾರಾಷ್ಟ್ರ-ಗುಜರಾತ್ ಕರಾವಳಿಯ ವಾಧ್ವಾನ್‌ನಿಂದ ಸುಮಾರು 20 ರಿಂದ 25 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ, ತಾರೆ ಮತ್ತು ಅವರ ತಂಡವು 157 ಘೋಲ್ ಮೀನುಗಳನ್ನು ಹಿಡಿದಿತ್ತು. ‘ಸೀ ಗೋಲ್ಡ್’ ಎಂದು ಕರೆಯಲಾಗುವ ಈ ಮೀನುಗಳಿಗೆ ಸಾಕಷ್ಟು ಬೇಡಿಕೆ ಇದೆ.
ಅವರು ಸಮುದ್ರದಿಂದ ಹೊರಬರುವ ಮುನ್ನವೇ ಈ ಸುದ್ದಿ ಬೆಂಕಿಯಂತೆ ಹರಡಿತ್ತು. ಆಗಸ್ಟ್ 28 ರಂದು, ಅವರು ಮುರ್ಬೆಗೆ ಮರಳಿದಾಗ ವ್ಯಾಪಾರಿಗಳು ಸಾಲುಗಟ್ಟಿ ನಿಂತಿದ್ದರು.
ತಾವು ಹಿಡಿದಿದ್ದ ಅಪರೂಪದ ಘೋಲ್ ಫಿಶ್‌ಗಳನ್ನು ಹರಾಜು ಮಾಡಿದಾಗ ಸುಮಾರು ₹ 1.33 ಕೋಟಿಗೆ ಬಿಡ್ ಆಗಿವೆ.
ಘೋಲ್ ಮೀನು ಅಥವಾ ಪ್ರೋಟೋನಿಬಿಯಾ ಡಯಾಕಾಂತಸ್ ಅನ್ನು ಸಾಮಾನ್ಯವಾಗಿ ಕಪ್ಪು ಚುಕ್ಕೆಗಳ ಕ್ರೋಕರ್ ಎಂದು ಕರೆಯಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಕಪ್ಪು ಜ್ಯೂಫಿಶ್ ಎಂದು ಕರೆಯಲಾಗುತ್ತದೆ. ಇದು ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಸೇರಿದ ಮೀನಿನ ಜಾತಿಯಾಗಿದೆ.
ಈ ಮೀನು ಅತ್ಯಂತ ದುಬಾರಿ ಸಮುದ್ರ ಮೀನುಗಳಲ್ಲಿ ಒಂದಾಗಿದೆ. ಔಷಧೀಯ ಗುಣಗಳನ್ನು ಹೊಂದಿರುವ ಇದರ ಹೃದಯವನ್ನು ‘ಸೀ ಗೋಲ್ಡ್’ ಎಂದು ಕರೆಯಲಾಗುತ್ತದೆ. ಇದು ವಿವಿಧ ಔಷಧಿಗಳನ್ನು ತಯಾರಿಸುವ ಪ್ರಮುಖ ಅಂಶವಾಗಿದೆ.
ಈ ಮೀನನ್ನು ಅತ್ಯಂತ ಸವಿಯಾದ ಪದಾರ್ಥವೆಂದು ಪರಿಗಣಿಸಲಾಗುತ್ತದೆ. ಪೂರ್ವ-ಏಷ್ಯಾದಲ್ಲಿ ಅದರ ಆಂತರಿಕ ಅಂಗಗಳ ಔಷಧೀಯ ಗುಣಗಳಿಗಾಗಿ ಹೆಚ್ಚು ಜನಪ್ರಿಯವಾಗಿದೆ.ಇದರ ರೆಕ್ಕೆಗಳು ಸಹ ಔಷಧೀಯ ಮೌಲ್ಯವನ್ನು ಹೊಂದಿವೆ.
ಹಾಂಕಾಂಗ್, ಮಲೇಷ್ಯಾ, ಥೈಲ್ಯಾಂಡ್, ಸಿಂಗಾಪುರ, ಜಪಾನ್‌ಗಳಲ್ಲಿ ಅದಕ್ಕೆ ಭಾರೀ ಬೇಡಿಕೆ ಇದೆ. ಹೆಚ್ಚುತ್ತಿರುವ ಸಮುದ್ರ ಮಾಲಿನ್ಯದಿಂದಾಗಿ ಅವುಗಳ ತಳಿ ನಶಿಸುತ್ತಿದೆ. ಈ ಮೀನಿನ ವೈಜ್ಞಾನಿಕ ಹೆಸರು “ಪ್ರೊಟೋನಿಬಿ ದಯಾಕ್ಯಾಂತಸ್’ . ಅದರ ಚರ್ಮದಿಂದ ಶಸ್ತ್ರಚಿಕಿತ್ಸೆಯ ಬಳಿಕ ಸ್ವಯಂಚಾಲಿತವಾಗಿ ಕರಗಿ ಹೋಗುವ ಸ್ಟಿಚ್ ತಯಾರಿಸುತ್ತಾರೆ.


