Monday, June 8, 2026
Homeಕರಾವಳಿಮಂಗಳೂರು : ಸತತವಾಗಿ 17 ವರ್ಷದಿಂದ ವಿದ್ಯುತ್ ಉತ್ಪಾದಿಸುತ್ತಿರುವ ಪುತ್ತೂರಿನ ಕೃಷಿಕ !

ಮಂಗಳೂರು : ಸತತವಾಗಿ 17 ವರ್ಷದಿಂದ ವಿದ್ಯುತ್ ಉತ್ಪಾದಿಸುತ್ತಿರುವ ಪುತ್ತೂರಿನ ಕೃಷಿಕ !

- Advertisement -
- Advertisement -

ಮಂಗಳೂರು : ಕೊರೋನಾ ಸಂಕಷ್ಟದ ಸಮಯದಲ್ಲಿ ಸರ್ಕಾರ ವಿದ್ಯುತ್ ಬೆಲೆ ಏರಿಕೆ ಮಾಡಿರುವದನ್ನು ಎಲ್ಲೆಡೆ ವಿರೋಧಿಸಲಾಗುತ್ತಿದೆ. ಆದರೆ ದಕ್ಷಿಣ ಕನ್ನಡದ ರೈತರೊಬ್ಬರಿಗೆ ವಿದ್ಯುತ್ ಬಿಲ್‌ನ ತಲೆಬಿಸಿಯೇ ಇಲ್ಲ. ಮನಸ್ಸಿದ್ದರೆ ಮಾರ್ಗವೆಂಬಂತೆ ಸರ್ಕಾರದ ಹಂಗಿಲ್ಲದೆ ಮಳೆಗಾಲದಲ್ಲಿ ಸ್ವತಃ ವಿದ್ಯುತ್ ಉತ್ಪಾದಿಸುತ್ತಿದ್ದಾರೆ. ಇವರು ಎಂಜಿನಿಯರ್ ಅಲ್ಲ, ರೈತರೊಬ್ಬರು ಕಳೆದ 17 ವರ್ಷಗಳಿಂದ ವಿದ್ಯುತ್ ಉತ್ಪಾದಿಸುತ್ತಿರುವುದೇ ವಿಶೇಷ.

ತಮ್ಮದೇ ಜಾಗದಲ್ಲಿ ನೈಸರ್ಗಿಕವಾಗಿ ಹರಿಯುವ ನೀರಿನಿಂದ ವಿದ್ಯುತ್ ತಯಾರಿಸಿ, ವಿದ್ಯುತ್‌ನಲ್ಲಿ ಆತ್ಮ ನಿರ್ಭರತೆಯನ್ನು ಸಾಧಿಸಿದವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಪ್ರಗತಿಪರ ಕೃಷಿಕ ಸುರೇಶ್ ಎಂಬುವವರು. ಕಳೆದ 17 ವರ್ಷಗಳಿಂದ ವಿದ್ಯುತ್‌ಗಾಗಿ ಸರಕಾರಕ್ಕೆ ಅಂಗಲಾಚದೆ ತನ್ನದೇ ಸ್ವಂತ ಜಲ ವಿದ್ಯುತ್ ಘಟಕವನ್ನು ಸ್ಥಾಪಿಸುವ ಮೂಲಕ ಸುರೇಶ್ ನಿರಂತರ ವಿದ್ಯುತ್ ಪಡೆಯುತ್ತಿದ್ದಾರೆ.

ಬಲ್ನಾಡಿನ 16 ಎಕ್ರೆ ವಿಶಾಲ ಪ್ರದೇಶದಲ್ಲಿ ಇವರಿಗೆ ಪ್ರಾಕೃತಿಕವಾಗಿ ಎತ್ತರ ಪ್ರದೇಶವಿದೆ. 60 ಅಡಿ ಎತ್ತರದಲ್ಲಿ ಟ್ಯಾಂಕ್ ನಿರ್ಮಿಸಿದ್ದು, ಮಳೆಗಾಲದಲ್ಲಿ 3 ಲಕ್ಷ ಲೀಟರ್ ನೀರು ಸಂಗ್ರಹವಾಗುತ್ತದೆ. ಆ ಟ್ಯಾಂಕ್‌ನ ನೀರನ್ನು ಗುರುತ್ವಾಕರ್ಷಣೆಯ ಆಧಾರದಲ್ಲಿ ಒತ್ತಡದ ಮೂಲಕ ಪೈಪ್‌ನಲ್ಲಿ ತಗ್ಗು ಪ್ರದೇಶಕ್ಕೆ ಹರಿಸಿ ಟರ್ಬೈನ್ ಮೂಲಕ ವಿದ್ಯುತ್ ಉತ್ಪಾದಿಸಿದ್ದಾರೆ.ಎತ್ತರದಲ್ಲಿ ಆರಂಭಕ್ಕೆ 6 ಇಂಚು, ಬಳಿಕ 4 ಇಂಚು, ಮತ್ತೆ ಕೆಳಗೆ ಬರುತ್ತಿದ್ದಂತೆ 2 ಇಂಚು, ಒಂದುವರೆ ಇಂಚು ಗಾತ್ರದ ಪಿವಿಸಿ ಪೈಪ್‌ನಲ್ಲಿ ನೀರು ಟರ್ಬೈನ್ ತಲಪುತ್ತದೆ. ಒತ್ತಡದಲ್ಲಿ ನೀರು ಬೀಳುವಾಗ ಟರ್ಬೈನ್ ತಿರುಗಲು ಪ್ರಾರಂಭವಾಗಿ ಡೈನೆಮೊ ಮೂಲಕ ವಿದ್ಯುತ್ ಉತ್ಪಾದನೆ ಆಗುತ್ತದೆ. ಪೈಪ್‌ನಲ್ಲಿ ನೀರಿನ ಜೊತೆ ಗಾಳಿಹೋಗದಂತೆ ಏರ್‌ಟೈಟ್ ಮಾಡಲಾಗಿದೆ. ಗಾಳಿ ಹೋದರೆ ವೋಲ್ಟೇಜ್‌ಲ್ಲಿ ವ್ಯತ್ಯಾಸ ಬರುತ್ತದೆ.

ಸರಿಸುಮಾರು 50 ರಿಂದ 60 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಅಳವಡಿಸಲಾಗಿರುವ ಈ ಟರ್ಬೈನ್‌ಗೆ ಖರ್ಚು ಮಾಡಿದ ಹಣಕ್ಕಿಂತ ಎಷ್ಟೋ ಪಾಲು ಹಣವನ್ನು ವಿದ್ಯುತ್ ಬಿಲ್‌ನಲ್ಲೇ ಉಳಿಸಿಕೊಂಡಿರುವ ಸುರೇಶ್, ತಮ್ಮಂತೆ ಇತರರೂ ಅವಕಾಶವಿದ್ದಲ್ಲಿ ಈ ರೀತಿಯ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ ತಮ್ಮಂತೆಯೇ ವಿದ್ಯುತ್‌ನಲ್ಲಿ ಆತ್ಮನಿರ್ಭರತೆ ಸಾಧಿಸಲು ಸಾಧ್ಯವಿದೆ, ಎನ್ನುತ್ತಾರೆ ಸುರೇಶ್.

- Advertisement -

Latest News

error: Content is protected !!