ಬೆಂಗಳೂರು: ಸ್ಯಾಂಡಲ್ವುಡ್ ಪಾಲಿಗೆ ಭಾನುವಾರ ಕಹಿ ದಿನವಾಗಿ ಮಾರ್ಪಾಡಾಗಿದೆ. ಸ್ಯಾಂಡಲ್ವುಡ್ನಲ್ಲಿ ಹೆಸರು ಮಾಡಿದ್ದ ಕನ್ನಡದ ಖ್ಯಾತ ನಟ ಚಿರಂಜೀವಿ ಸರ್ಜಾ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಗಿತ್ತು.
ಕನ್ನಡ ಚಿತ್ರರಂಗದಲ್ಲಿ ವಿಶಿಷ್ಠ ನಟನೆಯ ಮೂಲಕ ಗುರ್ತಿಸಿಕೊಂಡಿರುವ ನಟ ಚಿರಂಜೀವಿ ಸರ್ಜಾ ಅವರಿಗೆ ಇಂದು ತೀವ್ರ ತರವಾದಂತ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಅವರನ್ನು ಕೂಡಲೇ ಕುಟುಂಬಸ್ಥರು ಹತ್ತಿರದ ಅಪಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ನಿಧನರಾಗಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಇಬ್ಬರು ನಟರು ನಿಧನರಾಗಿರುವುದು ಕನ್ನಡ ಚಿತ್ರರಂಗಕ್ಕೆ ಆಘಾತ ತಂದಿದೆ. ಕಳೆದ ತಿಂಗಳು ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅನಾರೋಗ್ಯದಿಂದ ನಿಧನರಾಗಿದ್ದರು. ಇದರ ಬೆನ್ನಲ್ಲೇ ಖ್ಯಾತನಟ ಚಿರಂಜೀವಿ ಸರ್ಜಾ ನಿಧನರಾಗಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.
1980 ರಂದು ಆಕ್ಟೋಬರ್ 17ರಂದು ಬೆಂಗಳೂರಿನಲ್ಲಿ ಜನಿಸಿದ್ದ ಅವರು, ಹಿರಿಯ ನಟ ಶಕ್ತಿ ಪ್ರಸಾದ್ ಅವರ ಮೊಮ್ಮಗ ಮತ್ತು ನಟ ಅರ್ಜುನ್ ಸರ್ಜಾ ಅಳಿಯ. ಬಾಲ್ಡವಿನ್ ಬಾಲಕರ ಹೈ ಸ್ಕೂಲ್ನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದರು. ಬಳಿಕ ವಿಜಯ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಅಲ್ಲದೇ 4 ವರ್ಷ ಅರ್ಜುನ್ ಸರ್ಜಾ ಜೊತೆ ಸಹ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ್ದರು.
ವಾಯುಪುತ್ರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಚಿರಂಜೀವಿ ಸರ್ಜಾ ಅವರು 22ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಚಿರಂಜೀವಿ ಸರ್ಜಾ ಅಭಿನಯದ ಚಿತ್ರಗಳು
ವಾಯುಪುತ್ರ, ಗಂಡೆದೆ, ಚಿರು, ದಂಡಂ ದಶಗುಣಂ, ಕೆಂಪೇಗೌಡ, ವರದನಾಯಕ, ವಿಶಲ್, ಚಂದ್ರಲೇಖ, ಅಜಿತ್,
ರುದ್ರತಾಂಡವ, ಆಟಗಾರ, ರಾಮ್ಲೀಲಾ, ಆಕೆ, ಭರ್ಜರಿ, ಪ್ರೇಮ ಬರಹ, ಸಂಹಾರ, ಅಮ್ಮ ಐ ಲವ್ ಯೂ,
ಸಿಂಗ, ಖಾಕಿ, ಆದ್ಯಾ, ಶಿವಾರ್ಜುನ,
ರಾಜಮಾರ್ತಾಂಡ, ಏಪ್ರಿಲ್, ರಣಂ, ಕ್ಷತ್ರಿಯಾ ಸಿನಿಮಾಗಳು ಶೂಟಿಂಗ್ ಹಂತದಲ್ಲಿದೆ.
2018ರಲ್ಲಿ ನಟಿ ಮೇಘನಾ ರಾಜ್ ಜೊತೆ ಚಿರಂಜೀವಿ ಸರ್ಜಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.