ಮಂಗಳವಾರ ರಾತ್ರಿ ಹಂತಕರಿಂದ ಕೊಲೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಮನೆಗೆ ಗುರುವಾರ ಭೇಟಿ ನೀಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಗೆ ಪ್ರವೀಣ್ ಪತ್ನಿ ನೂತನಾ, “ನಿಮ್ಮ ಮಗಳಿಗೆ ಹೀಗೆ ಆಗಿದ್ದರೆ ಸುಮ್ಮನಿರುತ್ತಿದ್ದಿರಾ?” ಎಂದು ಪ್ರಶ್ನಿಸಿದ್ದಾರೆ.
ನನ್ನ ಗಂಡ ʼಅಂಗಾರಣ್ಣ ಅಂಗಾರಣ್ಣ ಅಂತಿದ್ರು. ಎರಡು ದಿನ ಆಯ್ತು ಅರೋಪಿಗಳು ಸಿಕ್ಕಿಲ್ಲ. ಇವತ್ತು ಚೆಕ್ ಹಿಡಿದು ಪರಿಹಾರ ಕೊಡಲು ಬರುತ್ತೀರಿ. ನಿಮ್ಮ ಪರಿಹಾರ ನಮಗೆ ಬೇಡ. ನನಗೆ ನನ್ನ ಗಂಡನ ಜೀವ ವಾಪಸ್ ಕೊಡಿ, ಅದು ಆಗದಿದ್ರೆ ಕೊಂದವರನ್ನು ನನ್ನ ಮುಂದೆ ತಂದು ನಿಲ್ಲಿಸಿʼ ಎಂದು ಹೇಳಿದರು.
ʼಈ ಮನೆ ಇವತ್ತು ಹೀಗೆ ನರಕ ಆಗಿದೆಯಲ್ಲ. ನಿಮ್ಮ ಮಗಳಿಗೆ ಹೀಗೆ ಆಗಿದ್ದರೆ ಸುಮ್ಮನಿರುತ್ತಿದ್ದಿರಾ? ಪಕ್ಷ ಪಕ್ಷ ಅಂತ ರಾತ್ರಿ ಹಗಲು ಓಡಾಡುತ್ತಿದ್ರು, ಮಠಂದೂರು ಪಿಎ ಅಂತ ಫೋನ್ ಮಾಡ್ತಿದ್ರು. ಸತ್ತು ಎರಡು ದಿನ ಆಯ್ತು, ಇವತ್ತು ಬಂದಿದ್ದೀರಾʼ ಎಂದು ಆಕ್ರೋಶ ಹೊರಹಾಕಿರುವ ವಿಡಿಯೊ ವೈರಲ್ ಆಗಿದೆ.
ಇನ್ನು ʼಬಿಜೆಪಿ ಕಾರ್ಯಕರ್ತರಿಗೆ ಇದೊಂದು ಪಾಠ ಆಗಿದ್ದು, ನಮ್ಮ ನಾಯಕರು ನಮ್ಮನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬ ಪಾಠ ಇದರಿಂದ ಕಲಿಯಬೇಕು. ಒಬ್ಬರೇ ಒಬ್ಬ ದೊಡ್ಡವರು ಸತ್ತಿಲ್ಲʼ ಎಂದು ಪ್ರವೀಣ್ ಕುಟುಂಬದವರೊಬ್ಬರು ಹೇಳಿದರು. ʼನೀವು ಇವತ್ತು ಇಲ್ಲಿಗೆ ಬಂದಿರುವ ಉದ್ದೇಶವೇನುʼ ಎಂದು ಅಲ್ಲಿದ್ದ ಮತ್ತೊಬ್ಬರು ಪ್ರಶ್ನಿಸಿದರು. ʼಬೆಳ್ಳಾರೆಯಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲ. ಇರುವ ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ಅಗತ್ಯ ಸಿಬ್ಬಂದಿ ಇಲ್ಲ. ನೀವು ಖಾಸಗಿಯವರಿಗೆ ಶಾಲೆ ಕಟ್ಟಲು ಸಹಾಯ ಮಾಡ್ತೀರಿ, ಆಸ್ಪತ್ರೆ ಕಟ್ಟಿಸಲ್ಲʼ ಎಂದು ಮಹಿಳೆಯೊಬ್ಬರು ದೂರಿದರು.
ಅಪರಾಧಿಯಂತೆ ಕೈಕಟ್ಟಿ ನಿಂತಿದ್ದ ಶಾಸಕ ಮಠಂದೂರು, “ನಾನು ಬೆಂಗಳೂರಿನಲ್ಲಿದ್ದ ಕಾರಣ ತಕ್ಷಣ ಬರಲಾಗಲಿಲ್ಲ. ಸುನೀಲಣ್ಣ, ನಳಿನಣ್ಣ ನಾವೆಲ್ಲ ಜೊತೆಗೆ ವಿಮಾನದಲ್ಲಿ ಬರುವುದಾಗಿ ಮಾತಾಡಿಕೊಂಡೆವು” ಎಂದು ಸಮರ್ಥನೆ ಕೊಡಲು ಮುಂದಾದರು. ಆಗ ಸ್ಥಳೀಯರೊಬ್ಬರು, ʼನಿಮಗೆ ವಿಮಾನವೇ ಆಗಬೇಕಾ, ಸಾರ್ವಜನಿಕ ಸಾರಿಗೆ ಆಗಲ್ವಾ? ನಮ್ಮ ಹುಡುಗ ಸುದ್ದಿ ತಿಳಿದ ಕೂಡಲೇ ರಾತ್ರಿ ಬಸ್ ಹತ್ತು ಬೆಳಿಗ್ಗೆ ಇಲ್ಲಿಗೆ ತಲುಪಿದ್ದಾನೆ. ನಿಮ್ಮ ಮನೆಯಲ್ಲಿ ಯಾರಿಗಾದರೂ ಹೀಗಾಗಿದ್ದರೆ ಹೀಗೇ ಮಾಡುತ್ತಿದ್ರಾʼ ಎಂದು ತರಾಟೆಗೆ ತೆಗೆದುಕೊಂಡರು.