ಉಡುಪಿ: ಹನ್ನೆರಡು ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬೈಕ್ ಕಳ್ಳರಿಬ್ಬರನ್ನು ಉಡುಪಿ ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳರಿಬ್ಬರು ಉಡುಪಿ ಜಿಲ್ಲೆ ಸೇರಿದಂತೆ ಅಂತರ್ ಜಿಲ್ಲೆಗಳಲ್ಲಿನ ಬೈಕ್ ಕಳ್ಳತನದಲ್ಲಿ ಭಾಗಿಯಾಗಿದ್ದು, ಇವರಿಂದ ಒಂಬತ್ತು ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ, ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಅತ್ತಿಗುಡ್ಡೆಯ ನಿವಾಸಿ ಸೋಮಶೇಖರ (21) ಹಾಗೂ ಬಾಗಲಕೋಟೆ ಜಿಲ್ಲೆ ಹುನಗುಂಡ ತಾಲೂಕು ಹೊಸಮನೆ ನಿವಾಸಿ ಶಂಕರ ಗೌಡ (23) ಅವರನ್ನು ಬಂಧಿಸಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕರ ನಿರ್ದೇಶನದಂತೆ ವಿಶೇಷ ತಂಡವು, ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿನ ದ್ವಿಚಕ್ರ ವಾಹನ ಕಳ್ಳತನ ತಡೆಗಟ್ಟುವುದು ಮತ್ತು ಪತ್ತೆ ಮಾಡುವ ಉದ್ದೇಶದಿಂದಾಗಿ ಕೋಟ ಸರಹದ್ದಿನ ವಿವಿಧ ಭಾಗದಲ್ಲಿ ವಾಹನ ತಪಾಸಣೆ ಮತ್ತು ದಾಖಲೆ ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಜೂ. 9ರಂದು ವಡ್ಡರ್ಸೆ ಗ್ರಾಮದ ರೈಲ್ವೇ ಬ್ರಿಡ್ಜ್ ಬಳಿ ನಂಬರ್ ಪ್ಲೇಟ್ ಇಲ್ಲದ ವಾಹನವನ್ನು ಸಂಶಯಾಸ್ಪದವಾಗಿ ನಿಲ್ಲಿಸಿರುವುದು ಕಂಡುಬಂದಿದೆ. ಪೊಲೀಸರು ವಾಹನದ ಬಳಿ ಇದ್ದ ಇಬ್ಬರಲ್ಲಿ ದಾಖಲಾತಿಗಳ ಕುರಿತು ವಿಚಾರಿಸಿದಾಗ ಯಾವುದೇ ದಾಖಲಾತಿಗಳನ್ನು ಹಾಜರುಪಡಿಸದಿರುವುದರಿಂದ ತನಿಖೆ ನಡೆಸಿದ್ದಾರೆ ಎನ್ನಲಾಗಿದೆ. ಆಗ ಅವೆಲ್ಲವೂ ಕಳ್ಳತನ ಮಾಡಿದ ಬೈಕ್ ಗಳು ಎನ್ನುವುದು ತಿಳಿದುಬಂದಿರುತ್ತದೆ.
ಇನ್ನೂ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಅವರು ಕಳೆದ ಮೂರು ವರ್ಷಗಳಿಂದ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿರುವುದು ತಿಳಿದುಬಂದಿದೆ. ಉಡುಪಿ ನಗರ ಠಾಣೆಯಲ್ಲಿ ಏಳು, ಬ್ರಹ್ಮಾವರ ಠಾಣೆಯ ಒಂದು, ಶಂಕರಾನಾರಾಯಣ ಠಾಣೆಯ ಒಂದು, ಶೃಂಗೇರಿ ಠಾಣೆಯ ಒಂದು, ವಿಜಯನಗರದ ಜಿಲ್ಲೆಯ ಇಟಗಿ ಠಾಣೆಯ ಒಂದು ಮತ್ತು ದಾವಣಗೆರೆ ಠಾಣೆಯ ಒಂದು ಪ್ರಕರಣ ಸೇರಿದಂತೆ ಒಟ್ಟು 12 ದ್ವಿಚಕ್ರ ವಾಹನಗಳನ್ನು ಈವರೆಗೂ ಕಳ್ಳತನ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಅವುಗಳಲ್ಲಿ ಮೂರು ಪಲ್ಸರ್ ಬೈಕ್, ಐದು ಸ್ಪೆಂಡರ್ ಬೈಕ್ ಮತ್ತು ಒಂದು ಹೀರೋ ಡಿಲಕ್ಸ್ ಬೈಕ್ ವಶಪಡಿಸಿಕೊಳ್ಳಲಾಗಿದ್ದು, ಸ್ವಾಧೀನಪಡಿಸಿದ ಸೊತ್ತುಗಳ ಮೌಲ್ಯ ಅಂದಾಜು ನಾಲ್ಕೂವರೆ ಲಕ್ಷ ರೂ. ಆಗಿದೆ ಎಂದು ತಿಳಿದುಬಂದಿದೆ.


