ಮೈಸೂರು: ಮಂಗಳೂರಿನಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಅಷ್ಟಮಂಗಲ ಪ್ರಶ್ನೆಗಿಂತ ಎಲ್ಲಾ ತೀರ್ಮಾನ ಆಗುವುದು ಕೇಶವ ಕೃಪಾದಲ್ಲಿ. ಅಲ್ಲಿಂದ ಬರುವ ಸಂದೇಶಗಳನ್ನು ಬಿಜೆಪಿಯವರು ಪಾಲಿಸುತ್ತಾರೆ ಎಂದು ಟೀಕಿಸಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ರೀತಿಯ ವಾತಾವರಣದಿಂದ ದೇಶಕ್ಕೆ ಮುಂದೆ ಉತ್ತಮ ಭವಿಷ್ಯ ಇಲ್ಲ ಎಂದರು. ಇನ್ನೂ ಒಂದು ವರ್ಷ ಈ ತರದ ಬೆಳವಣಿಗೆಗಳು ನಡೆಯುತ್ತಿರುತ್ತವೆ. ದೇಶದ ಶಾಂತಿ, ಸಾಮರಸ್ಯ ಮತ್ತಷ್ಟು ಹದಗೆಡುವ ಆತಂಕ ಎದುರಾಗಿದೆ ಎಂದು ಹೆಚ್ಡಿಕೆ ಕಳವಳ ವ್ಯಕ್ತಪಡಿಸಿದರು.
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿಚಾರದಲ್ಲಿ ಜೆಡಿಎಸ್ ಸ್ಟ್ಯಾಂಡ್ ಸಂಬಂಧ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಆತುರ ಮಾಡುವುದು ಏನಿದೆ? ದೇವರು ಕನಸ್ಸಿನಲ್ಲೇನಾದರೂ ಬಂದು ನನ್ನ ಮೂಲ ಸ್ಥಾನ ಇಲ್ಲಿದೆ ಅಂತ ಹೇಳಿದ್ದಾನೆಯೇ? ಅದನ್ನು ಸರಿಪಡಿಸಿ ಅಂತ ಕೇಳಿದ್ದಾರಾ ದೇವರು, ಇದನ್ನು ನೋಡಿದರೆ ಮತ್ತೊಂದು ವಿವಾದ ಶುರು ಆಗುವ ಲಕ್ಷಣ ಇದೆ ಎಂದರು.


