Thursday, July 3, 2025
Homeಕರಾವಳಿಪುತ್ತೂರು: ಭಜನಾ ಮಂದಿರದ ಜಾಗದ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ- ನಾಲ್ವರಿಗೆ ಗಾಯ, ಆಸ್ಪತ್ರೆಗೆ...

ಪುತ್ತೂರು: ಭಜನಾ ಮಂದಿರದ ಜಾಗದ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ- ನಾಲ್ವರಿಗೆ ಗಾಯ, ಆಸ್ಪತ್ರೆಗೆ ದಾಖಲು

spot_img
- Advertisement -
- Advertisement -

ಪುತ್ತೂರು: ಭಜನಾ ಮಂದಿರದ ಪರಿಸರವನ್ನು ಸ್ವಚ್ಛಗೊಳಿಸುವ ವೇಳೆ ಎರಡು ಗುಂಪುಗಳು ಹೊಡೆದಾಡಿಕೊಂಡ ಘಟನೆ ನಡೆದಿದೆ. ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಲೂಕಿನ ಆರ್ಯಾಪು ಗ್ರಾಮದ ದೊಡ್ಡಡ್ಕದಲ್ಲಿ ಈ ಘಟನೆ ನಡೆದಿದೆ.

ಭಜನಾ ಮಂದಿರಕ್ಕೆ ಸಂಬಂಧಿಸಿದ ಜಮೀನಿನ ವಿಚಾರವಾಗಿ ಜಗಳ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆರ್ಯಾಪು ಗ್ರಾಮದ ದೊಡ್ಡಡ್ಕ ಕೊಗ್ಗ ಆಚಾರ್ಯ ಅವರ ಪತ್ನಿ ಸರೋಜಿನಿ (58), ಅವರ ಪುತ್ರ ನಾರಾಯಣ (35), ಪೂವಪ್ಪ ನಾಯ್ಕ (44), ಅವರ ಪತ್ನಿ ಪ್ರೇಮಲತಾ (40) ಘರ್ಷಣೆಯಲ್ಲಿ ಗಾಯಗೊಂಡವರು.

ಗಾಯಗೊಂಡವರಲ್ಲಿ ಒಬ್ಬರಾದ ನಾರಾಯಣ ಮಾತನಾಡಿ, ಭಜನಾ ಮಂದಿರ ನಿರ್ಮಾಣವಾಗಿರುವ ಜಾಗವನ್ನು 1991ರಲ್ಲಿ ಅಕ್ರಮ ಸಕ್ರಮದಡಿ ನಮಗೆ ಮಂಜೂರು ಮಾಡಲಾಗಿತ್ತು. ಆ ಜಮೀನಿನಲ್ಲಿ ನನ್ನ ತಂದೆ ಭಜನಾ ಮಂದಿರ ನಿರ್ಮಿಸಿ ಗ್ರಾಮದ ಜನರಿಗೆ ಭಜನಾ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಡುತ್ತಿದ್ದರು. ನಂತರ ಸ್ಥಳೀಯರು ಭಜನಾ ತಂಡ ಕಟ್ಟಿಕೊಂಡು ಆ ಜಾಗವನ್ನು ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ಪ್ರಕರಣವೂ ದಾಖಲಾಗಿದೆ. ಕೋರ್ಟ್ ಕೂಡ ತಡೆಯಾಜ್ಞೆ ನೀಡಿದೆ. ಆಗಲೂ ಭಜನಾ ಮಂಡಳಿಯವರು ನಿರಂತರವಾಗಿ ಜಮೀನಿನಲ್ಲಿ ಚಟುವಟಿಕೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಜಮೀನಿನಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಕ್ರಮ ಕೈಗೊಂಡಿದ್ದಾರೆ.

ವಿವಾದಿತ ಜಮೀನಿನಲ್ಲಿ ಭಾನುವಾರ ಪೂವಪ್ಪ ನಾಯಿಕ, ವೆಂಕಟಕೃಷ್ಣ ಭಟ್, ಜಗದೀಶ ಭಂಡಾರಿ, ರುಕ್ಮಯ್ಯ ಮೂಲ್ಯ, ಸೇಸಪ್ಪ ನಾಯಿಕ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ನನ್ನ ತಾಯಿ ಸರೋಜಿನಿ ಅವರನ್ನು ಪ್ರಶ್ನಿಸಿದಾಗ ಅವರು ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಆಕೆಯ ಕೈಗೆ ಗಂಭೀರ ಗಾಯವಾಗಿದೆ. ಜತೆಗೆ ನನ್ನ ಹಾಗೂ ನಮ್ಮ ಕುಟುಂಬದ ಸದಸ್ಯರಾದ ಪೂಜಾಶ್ರೀ ಹಾಗೂ ದೀಪಾ ಎಂಬುವವರಿಗೆ ಮರದ ದಿಮ್ಮಿಗಳಿಂದ ಹಲ್ಲೆ ನಡೆಸಿದ್ದಾರೆ ಎಂದರು.

ಈ ಸಂಬಂಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!