ಉಪ್ಪಿನಂಗಡಿ ಬಳಿಯ ಇಳಂತಿಲ ಗ್ರಾಮದ ನಿವಾಸಿ ನಿವೃತ್ತ ಯೋಧ ಜಯಕುಮಾರ್ ರವರ ಮನೆ ಬಳಿ ಸ್ಪೋಟಕ ವಸ್ತು ಪತ್ತೆಯಾಗಿದೆ.
ಹ್ಯಾಂಡ್ ಗ್ರೆನೇಡ್ ಮಾದರಿಯ ಬಾಂಬ್ ಪತ್ತೆಯಾಗಿದ್ದು ಇದನ್ನುಗಮನಿಸಿದ ನಿವೃತ್ತ ಸೈನಿಕರೊಬ್ಬರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಶನಿವಾರ ಸಂಜೆ 5 ಗಂಟೆ ವೇಳೆಗೆ ಉಪ್ಪಿನಂಗಡಿಯಿಂದ ತನ್ನ ಮನೆಗೆ ನಡೆದುಕೊಂಡು ತೆರಳುತ್ತಿದ್ದಾಗ ಗುಡ್ಡದ ಇಳಿಜಾರಿನಲ್ಲಿ ಗ್ರೆನೇಡ್ ಮಾದರಿಯ ಸ್ಫೋಟಕ ವಸ್ತು ಕಂಡುಬಂದಿದೆ. ಅದರಲ್ಲಿ ಹಳದಿ ಬಣ್ಣದ ಪ್ಲಾಸ್ಟಿಕ್ ಕವರಿನಲ್ಲಿ ಒಂದು ಗ್ರೆನೇಡ್ ಇದ್ದು ಇತರ ನಾಲ್ಕು ಗ್ರೆನೇಡ್ ಗಳು ಪರಿಸರದಲ್ಲಿ ಹರಡಿಕೊಂಡ ರೀತಿ ಬಿದ್ದಿತ್ತು.
ಜಯಕುಮಾರ್ ಭಾರತೀಯ ಸೇನೆಯ ಭೂಸೇನಾ ರಜಿಮೆಂಟಿನಲ್ಲಿ ಎಸ್.ಸಿ.ಒ ಆಗಿ ನಿವೃತ್ತಿ ಹೊಂದಿದ್ದು ಆ ವಸ್ತುಗಳನ್ನು ನೋಡಿ ಗ್ರೆನೇಡ್ ಎಂಬುದನ್ನು ಕಂಡುಕೊಂಡಿದ್ದಾರೆ. ಸ್ಫೋಟಕ ವಸ್ತುಗಳನ್ನು ಕಾಡು ಪ್ರಾಣಿಗಳು ಬೇರೆಡೆಗೆ ಕಚ್ಚಿಕೊಂಡು ಹೋಗಿ ಸಾರ್ವಜನಿಕರಿಗೆ ಅಪಾಯ ಆಗುವುದನ್ನು ಅರಿತ ಜಯಕುಮಾರ್, ಅವುಗಳನ್ನು ತನ್ನ ಮನೆಯ ಅಂಗಳದ ಮೂಲೆಯಲ್ಲಿಟ್ಟು ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗ್ರೆನೇಡ್ ಸ್ಫೋಟಗಳನ್ನು ಯಾರೋ ದುಷ್ಕರ್ಮಿಗಳು ಜನರು ಸಂಚರಿಸುವ ದಾರಿಯ ಬದಿಯಲ್ಲಿ ಹಾಕಿದ್ದು ಈ ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಯಕುಮಾರ್ ದೂರು ನೀಡಿದ್ದಾರೆ.