ಮೂಡುಬಿದ್ರೆ:ಯುವತಿಯರಿಬ್ಬರು ಮುಸ್ಲಿಮ್ ದಂಪತಿ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದುದನ್ನು ಗಮನಿಸಿದ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿದ ಘಟನೆ ಮೂಡುಬಿದ್ರೆಯಲ್ಲಿ ನಡೆದಿದೆ.

ಬೆಳುವಾಯಿ ಕಡೆಯಿಂದ ಮೂಡುಬಿದ್ರೆ ಕಡೆಗೆ ಆಲ್ಟೋ ಕಾರಿನಲ್ಲಿ ಬರುತ್ತಿದ್ದ ಮುಸ್ಲಿಮ್ ದಂಪತಿಗಳಿಗೆ ಬೇರೆ ವಾಹನದಲ್ಲಿ ಹಿಂಬಾಲಿಸಿ ಬಂದ ಹಿಂದು ಸಂಘಟನೆಯ ಕಾರ್ಯಕರ್ತರು ಕಾರನ್ನು ಕೆಸರ್ ಗದ್ದೆ ಎಂಬಲ್ಲಿ ಅಡ್ಡಹಾಕಿದ್ದಾರೆ. ಅಲ್ಲದೆ ಮುಸ್ಲಿಮ್ ದಂಪತಿ ಮತ್ತು ಅದರಲ್ಲಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಮುಸ್ಲಿಂ ದಂಪತಿ ಪರಿಚಿತರಾಗಿದ್ದರಿಂದ ಯುವತಿಯರು ಅವರ ಜೊತೆ ಕಾರಿನಲ್ಲಿ ತೆರಳುತ್ತಿದ್ದರು ಎಂದು ಹೇಳಲಾಗಿದೆ.
ಪ್ರಕರಣದ ಬಗ್ಗೆ ಮೂಡುಬಿದ್ರೆ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಹಿಂದು ಜಾಗರಣ ವೇದಿಕೆಯ ಮೂಡುಬಿದ್ರೆ ಘಟಕದ ಮುಖಂಡ ಸಮಿತ್ ರಾಜ್ ದರೆಗುಡ್ಡೆ ಮತ್ತು ಕಾರ್ಯಕರ್ತ ಸಂದೀಪ್ ಪೂಜಾರಿ ಬಂಧಿತರಾಗಿದ್ದು, ಅವರ ವಿರುದ್ಧ 354, 153 ಎ, 504, 506 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ. ಕಾರಿನಲ್ಲಿದ್ದ ದಂಪತಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಕಾರ್ಕಳ ತಾಲೂಕಿಗೆ ಸೇರಿದವರಾಗಿದ್ದಾರೆ.