ಬೆಳ್ತಂಗಡಿ: ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ರಿಯಾಜ್ ಮತ್ತು ಸಾಕೀರ್ ಇಬ್ಬರು ಆರೋಪಿಗಳು. ಬೆಳ್ತಂಗಡಿ ಪೊಲೀಸ್ ಠಾಣೆಯ ಪಿ ಎಸ್ ಐ ತಮ್ಮ ಸಿಬ್ಬಂದಿಗಳೊಂದಿಗೆ ಬುಧವಾರದಂದು ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಕೊಯ್ಯೂರು ಕ್ರಾಸ್ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ, ಲಾಯಿಲ ಕಡೆಯಿಂದ ಬರುತ್ತಿದ್ದ KA 21 B 2763 ನಂಬರಿನ ಆಟೋ ರಿಕ್ಷಾವನ್ನು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ.
ಈ ವೇಳೆ ಯಾವುದೇ ಪ್ರಾಧಿಕಾರದಿಂದ ಪರವಾನಗಿ ಪಡೆಯದೆ ದನದ ಮಾಂಸವನ್ನು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಟೋರಿಕ್ಷಾದ ಹಿಂಬದಿ ಸೀಟಿನ ಕೆಳಗಡೆ ಪಾಲಿಥೀನ್ ಚೀಲದಲ್ಲಿ ಇದ್ದ ತಲಾ 1 ಕೆಜಿಯಂತೆ 23 ಕೆಜಿ ದನದ ಮಾಂಸದ ಕಟ್ಟುಗಳನ್ನು, ಆಟೋ ರಿಕ್ಷಾವನ್ನು ಹಾಗೂ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ದನದ ಮಾಂಸದ ಒಟ್ಟು ಮೌಲ್ಯ ರೂ 5060 ರೂ ಮತ್ತು ಸಾಗಾಟಕ್ಕೆ ಬಳಸಿದ ಆಟೋ ರಿಕ್ಷಾದ ಮೌಲ್ಯ ರೂ 60,000 ಆಗಿದೆ.ಸದ್ಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.