ಉಪ್ಪಿನಂಗಡಿ :ಮೀನು ಮಾರಾಟದ ಅಂಗಡಿಯೊಂದು ರವಿವಾರ ತಡರಾತ್ರಿ ಬೆಂಕಿಗಾಹುತಿಯಾದ ಘಟನೆ ಉಪ್ಪಿನಂಗಡಿಯ ಸುಬ್ರಹ್ಮಣ್ಯ ಕ್ರಾಸ್ ಬಳಿ ನಡೆದಿದೆ. ಕಿಡಿಗೇಡಿಗಳಿಂದ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಸ್ಥಳಕ್ಕೆ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಇಲ್ಲಿನ ಹಳೆಗೇಟು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಅಶೋಕ್ ಎಂಬವರಿಗೆ ಸೇರಿದ ಅಂಗಡಿ ಇದಾಗಿದ್ದು,ಘಟನೆಯಿಂದ ಮೀನಿನ ಅಂಗಡಿ ಹಾಗೂ ಮಂಜುಗಡ್ಡೆ ಹಾಕಿ ಶೇಖರಿಸಿಟ್ಟ ಮೀನುಗಳು ಸುಟ್ಟು ಹೋಗಿವೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.

ಸೋಮವಾರ ಬೆಳಗ್ಗೆ ಸಂಘ ಪರಿವಾರದ ಸಂಘಟನೆಯ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದು ಬೆಂಕಿ ಹಚ್ಚಿರುವ ಕಿಡಿಗೇಡಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿದ್ದಾರೆ.ಅಶೋಕ್ ಅವರು ಹಿಂದೂ ಪರ ಸಂಘಟನೆಯ ಕಾರ್ಯಕರ್ತರಾಗಿದ್ದರು. ಇವರ ಸಹೋದರ ಮೋಹನದಾಸ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ತಿನ ಉಪ್ಪಿನಂಗಡಿ ವಲಯದ ಪ್ರಮುಖರಾಗಿದ್ದರು. ಕಳೆದ ವರ್ಷದ ಲಾಕ್ ಡೌನ್ ಬಳಿಕ ಮೀನು ವ್ಯಾಪಾರಕ್ಕೆ ಇಳಿದಿದ್ದ ಇವರು ಆರಂಭದಲ್ಲಿ ಉಪ್ಪಿನಂಗಡಿ ಪೇಟೆಯ ಗಾಂಧಿ ಪಾರ್ಕ್ ಬಳಿ ಮೀನಿನ ವ್ಯಾಪಾರ ಆರಂಭಿಸಿದ್ದರು. ಇವರ ಅಂಗಡಿ ರಸ್ತೆ ಬದಿ ಇದೆ ಎಂಬ ಕಾರಣಕ್ಕೆ ಉಪ್ಪಿನಂಗಡಿ ಗ್ರಾ.ಪಂ ಆ ಆಗ ಇವರ ಅಂಗಡಿಯನ್ನು ತೆರವುಗೊಳಿಸಿತ್ತು. ಅದಾದ ಬಳಿಕ ಉಪ್ಪಿನಂಗಡಿಯ ಹಳೇ ಗೇಟ್ ಬಳಿ ಮೀನಿನ ವ್ಯಾಪಾರ ಆರಂಭಿಸಿದ್ದರು.



ಇದೀಗ ದುಷ್ಕರ್ಮಿಗಳು ಅಂಗಡಿಗೆ ಬೆಂಕಿ ನೀಡಿದ್ದು ಎರಡನೇ ಬಾರಿ ಅವರ ವ್ಯವಹಾರಕ್ಕೆ ಧಕ್ಕೆ ಉಂಟಾಗಿದೆ. ಇವರ ಅಂಗಡಿಗೆ ಬೆಂಕಿ ಹಚ್ಚಿರುವ ಸುದ್ದಿ ತಿಳಿಯುತ್ತಲೇ ನೂರಾರು ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಅಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ ಹಾಗೂ ಸ್ಥಳದಲ್ಲಿ ಬಂದೋಬಸ್ತು ನಡೆಸಿದ್ದಾರೆ. ಗಲಭೆಗೆ ಕುಮ್ಮಕ್ಕು ನೀಡುವ ಉದ್ದೇಶದಿಂದ ಈ ಕೃತ್ಯ ವನ್ನು ದುಷ್ಕರ್ಮಿಗಳು ಎಸಗಿರುವ ಸಾಧ್ಯತೆ ಇದೆ ಎಂಬ ಅನುಮಾನ ದಟ್ಟವಾಗಿದೆ.