ಕೇರಳ: ಪ್ರೀತಿ ಮಾಯೆ ಹುಷಾರು ಅನ್ನೋ ಮಾತಿದೆ. ಪ್ರೀತಿ ಏನೆಲ್ಲಾ ಮಾಡುಸುತ್ತೆ ಅಂತಾ ಹೇಳೋದಕ್ಕೆ ಸಾಧ್ಯಾನೇ ಇಲ್ಲ. ಆದ್ರೆ ಈ ಪ್ರೇಮ ಕಹಾನಿಯನ್ನು ಕೇಳಿದ್ರೆ ನೀವು ಯಪ್ಪಾ ಇದು ಹೇಗೆ ಸಾಧ್ಯ ಹೀಗೆಲ್ಲಾ ಆಗುತ್ತಾ ಅಂತಾ ತಲೆಗೆ ಹುಳು ಬಿಟ್ಟುಕೊಳ್ಳೋದು ಪಕ್ಕಾ…
ಹೌದು… 11 ವರ್ಷದ ಹಿಂದೆ ನಾಪತ್ತೆಯಾಗಿದ್ದ ಯುವತಿ ಕೇಸ್ಗೆ ರೋಚಕ ತಿರುವು ಸಿಕ್ಕಿದೆ. ಈಕೆಯನ್ನ ಪ್ರಿಯಕರನೇ ತನ್ನ ಮನೆಯಲ್ಲಿ ಯಾರಿಗೂ ತಿಳಿಯದಂತೆ ದಶಕ ಕಾಲ ಅಡಗಿಸಿಟ್ಟಿದ್ದ! ಆ ಮನೆಯಲ್ಲಿದ್ದ ಕುಟುಂಬಸ್ಥರಿಗೂ ಮಗನ ಪ್ರೇಯಸಿ ತಮ್ಮ ಮನೆಯಲ್ಲಿರೋದು ಗೊತ್ತೇ ಇರಲಿಲ್ಲ. ನೆರೆಹೊರೆಯವರಿಗೂ ಒಂದು ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಆದರೆ ಇದೀಗ ಆ ಕೋಣೆಯ ರಹಸ್ಯ ಬಯಲಾಗಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಅರಿಯೂರು ಸಮೀಪದ ಕರೈಕ್ಕಟ್ಟುಪರಂಬು ಗ್ರಾಮದಲ್ಲಿ 2010ರ ಫೆಬ್ರವರಿ 2ರಂದು 19 ವರ್ಷದ ಯುವತಿಯೊಬ್ಬಳು ನಾಪತ್ತೆಯಾಗಿದ್ದಳು. ಮಗಳಿಗಾಗಿ ಈಕೆಯ ಪಾಲಕರು ಹುಡುಕಿದ ಜಾಗವಿಲ್ಲ. ಪೊಲೀಸ್ ಠಾಣೆಯಲ್ಲಿ ಯುವತಿ ನಾಪತ್ತೆ ಕೇಸ್ ಕೂಡ ದಾಖಲಾಗಿತ್ತು. ಪೊಲೀಸರು ಹುಡುಕಾಡಿದರೂ ಪತ್ತೆಯಾಗಲಿಲ್ಲ.
ಆದರೆ, ಆ ಯುವತಿ ಅದೇ ಗ್ರಾಮದ ತನ್ನ ಪ್ರಿಯಕರನ ಮನೆಯಲ್ಲೇ ಇದ್ದಳು. ಅಂದು ನಾಪತ್ತೆಯಾಗಿದ್ದ ಯುವತಿಯನ್ನ ಪ್ರಿಯಕರ ತನ್ನ ಮನೆಯ ಕೋಣೆಯೊಂದರಲ್ಲಿ ಅಡಗಿಸಿಟ್ಟಿದ್ದ. ಯುವತಿ ಮತ್ತು ಯುವಕನ ಮನೆ ಕೇವಲ 100 ಮೀಟರ್ ಅಂತರದಲ್ಲಿದ್ದರೂ ಯಾರೊಬ್ಬರಿಗೂ 11 ವರ್ಷ ಕಾಲ ಗೊತ್ತೇ ಆಗಿಲ್ಲ. ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ ವೇಳೆ ಕೋಣೆಯ ಕಿಟಕಿ ಮೂಲಕ ಯುವತಿಯನ್ನ ಸ್ನಾನಗೃಹ, ಶೌಚಗೃಹಕ್ಕೆ ಕರೆದೊಯ್ಯುತ್ತಿದ್ದ. ತಾನು ಕೋಣೆಯಲ್ಲೇ ಊಟ ಮಾಡುವೆ ಎಂದು ತಟ್ಟೆಗೆ ಊಟ ಹಾಕಿಕೊಂಡು ಹೋಗುತ್ತಿದ್ದವ ತನ್ನ ಪ್ರೇಯಸಿಗೆ ಕೊಡುತ್ತಿದ್ದ. ತನ್ನ ಕೋಣೆಯೊಳಗೆ ಯಾರಿಗೂ ಪ್ರವೇಶ ನೀಡುತ್ತಿರಲಿಲ್ಲ. ಮನೆಯವರು ಏಕೆ? ಏನು ಪ್ರಶ್ನಿಸುವುದನ್ನು ತಪ್ಪಿಸಲು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಹಾಗಾಗಿ ಮನೆಯವರೂ ಅವನತ್ತ ಹೆಚ್ಚು ಸುಳಿಯುತ್ತಿರಲಿಲ್ಲ. ಕೆಲಸಕ್ಕೆ ಹೋದವ ಬೇಗ ಮನೆಗೆ ಬಂದು ಕೋಣೆ ಸೇರಿಕೊಳ್ಳುತ್ತಿದ್ದ. ಪ್ರೇಯಸಿಯೊಂದಿಗೆ ಕಾಲ ಕಳೆಯುತ್ತಿದ್ದ. ಹೀಗೆ ರಹಸ್ಯ ಕೋಣೆಯಲ್ಲಿ ನಡೆಯುತ್ತಿದ್ದ ಇವರಿಬ್ಬರ ಪ್ರೇಮ್ಕಹಾನಿ ಬಯಲಾಗಿದ್ದೇ ರೋಚಕ.
ಮೂರು ತಿಂಗಳ ಹಿಂದಷ್ಟೆ ಯುವಕ ನಾಪತ್ತೆಯಾಗಿದ್ದ. ಆತಂಕಗೊಂಡ ಪಾಲಕರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಇತ್ತೀಚಿಗೆ ಯುವಕ ತನ್ನ ಸಹೋದರನ ಕಣ್ಣಿಗೆ ಬಿದ್ದಿದ್ದ. ಪೊಲೀಸರಿಗೆ ಈ ವಿಷಯ ಗೊತ್ತಾಗುತ್ತಿದ್ದಂತೆ ಯುವಕನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದಾಗ ಗೊತ್ತಾಯ್ತು ಪ್ರೇಯಸಿಯನ್ನ ದಶಕ ಕಾಲ ರಹಸ್ಯವಾಗಿ ಕೋಣೆಯಲ್ಲೇ ಇಟ್ಟದ್ದು ಯಾಕೆ ಅಂತಾ ಗೊತ್ತಾಗಿದೆ.
ಒಂದೇ ಗ್ರಾಮದ ಯುವಕ-ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಳ್ಳಲು ಜಾತಿ ಅಡ್ಡ ಬಂದಿತ್ತು. ಮನೆಯವರು ಒಪ್ಪುವುದಿಲ್ಲ. ಎಲ್ಲಿಯಾದರೂ ಓಡಿ ಹೋಗೋಣ ಅಂದ್ರೆ ಹಣವಿಲ್ಲ ಎಂದು ಯೋಚಿಸಿದ ಪ್ರೇಮಿಗಳು ರಹಸ್ಯ ಕೋಣೆಯಲ್ಲೇ ಬಚ್ಚಿಟ್ಟುಕೊಂಡು ಲವ್ ಕಹಾನಿ ಮುಂದುವರಿಸಿದ್ದಾರೆ. ಇತ್ತೀಚಿಗೆ ರಾತ್ರಿ ವೇಳೆ ಆಕೆಯನ್ನ ಮನೆಯಿಂದ ಹೊರ ಕರೆದೊಯ್ದು ಮದುವೆ ಮಾಡಿಕೊಂಡು ವಿಥಾನಸ್ಸೆರಿ ಗ್ರಾಮದಲ್ಲಿ ವಾಸವಿದ್ದ. ಇನ್ನು ರಹಸ್ಯ ಕೋಣೆಯ ಕಿಟಕಿ ಮೂಲಕ ಯುವತಿ ತನ್ನ ತಂದೆ-ತಾಯಿಯನ್ನ ಎರಡ್ಮೂರು ಬಾರಿ ನೋಡಿದ್ದರೂ ಮಾತನಾಡಿಸುವ ಗೋಜಿಗೆ ಹೋಗಿರಲಿಲ್ಲವಂತೆ. ಇದೀಗ ಇವರ 11 ವರ್ಷದ ಪ್ರೇಮ ಕಹಾನಿಯನ್ನು ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.