ಬಲಿಯಾ: ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದಿರುವ ಗ್ಯಾಂಗ್ರೇಪ್ ಪ್ರಕರಣದ ಕುರಿತು ದೇಶಾದ್ಯಂತ ಆಕ್ರೋಶ ಮುಗಿಲುಮುಟ್ಟಿದೆ.ಇದರ ಬೆನ್ನಲ್ಲೇ ಬಿಜೆಪಿ ಶಾಸಕ ನೀಡಿರುವ ಹೇಳಿಕೆಯೊಂದು ವಿವಾದವನ್ನು ಹುಟ್ಟುಹಾಕಿದೆ.
ಬಲಿಯಾ ಕ್ಷೇತ್ರದ ಶಾಸಕ ಸುರೇಂದ್ರ ಸಿಂಗ್ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ “ನಾನು ಶಾಸಕನಾಗಿರುವುದರ ಜತೆಗೆ ಓರ್ವ ಶಿಕ್ಷಕನು ಹೌದು. ಉತ್ತಮ ಆಡಳಿತವಾಗಲಿ ಅಥವಾ ತಲ್ವಾರ್ನಿಂದಾಗಲಿ ರೇಪ್ ಪ್ರಕರಣಗಳನ್ನು ತಡೆಯಲು ಸಾಧ್ಯವಿಲ್ಲ. ಬದಲಾಗಿ ಉತ್ತಮ ಸಂಸ್ಕಾರದಿಂದ ಮಾತ್ರ ಇಂತಹ ಪ್ರಕರಣಗಳನ್ನು ನಿಲ್ಲಿಸಬಹುದು. ಹೀಗಾಹಿ ಎಲ್ಲ ತಂದೆ-ತಾಯಂದಿರು ತಮ್ಮ ಹೆಣ್ಣು ಮಕ್ಕಳಿಗೆ ಒಳ್ಳೆಯ ಸಂಸ್ಕೃತಿಯನ್ನು ಕಲಿಸಿ ಉತ್ತಮ ಮೌಲ್ಯಗಳನ್ನು ಬೆಳೆಸಿ” ಎಂದು ಹೇಳಿದ್ದಾರೆ.
ವಿವಾದಾತ್ಮಕ ಹೇಳಿಕೆಗಳಿಂದಲೇ ಪ್ರಸಿದ್ಧಿ ಪಡೆದ ಶಾಸಕ ಸುರೇಂದ್ರ ಸಿಂಗ್ ಕಳೆದ ವರ್ಷ ಗಾಂಧೀಜಿ ಕೊಂದ ನಾಥೂರಾಮ್ ಗೂಡ್ಸೆ ಉಗ್ರನಲ್ಲ ಎಂದು ವಿವಾದ ಸೃಷ್ಟಿಸಿದ್ದರು. ಹೀಗೆ ಸಾಕಷ್ಟು ಬಾರಿ ತಮ್ಮ ಹೇಳಿಕೆಗಳಿಂದ ಸುರೇಂದ್ರ ಸಿಂಗ್ ಜನರ ಆಕ್ರೋಶಕ್ಕೂ ಗುರಿಯಾಗಿದ್ದಾರೆ.


