
ಮಂಗಳೂರು: ಟ್ರಾವೆಲ್ಸ್ ಕಂಪನಿಯೊಂದಕ್ಕೆ ಪಾವತಿಸಿದ ಹಣವನ್ನು ವಾಪಸ್ ಪಡೆಯಲು ರಾಷ್ಟ್ರೀಯ ಗ್ರಾಹಕರ ವೇದಿಕೆಯಲ್ಲಿ ಆನ್ಲೈನ್ ದೂರು ದಾಖಲಿಸಲು ಮುಂದಾದ 67 ವರ್ಷದ ವ್ಯಕ್ತಿಯೊಬ್ಬರು ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ವಂಚಕರು ನಕಲಿ ಲಿಂಕ್ ಕಳುಹಿಸಿ ಅವರ ನಾಲ್ಕು ಬ್ಯಾಂಕ್ ಖಾತೆಗಳಿಂದ ಒಟ್ಟು ₹3.23 ಲಕ್ಷ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು 2025ರ ಮಾರ್ಚ್ನಲ್ಲಿ ಟ್ರಾವೆಲ್ಸ್ ಕಂಪನಿಯೊಂದರಲ್ಲಿ ₹1.20 ಲಕ್ಷ ಪಾವತಿಸಿ ನೋಂದಣಿ ಮಾಡಿಕೊಂಡಿದ್ದರು. ಆದರೆ ಕಂಪನಿಯು ನೀಡಿದ್ದ ಭರವಸೆಯಂತೆ ಯಾವುದೇ ವ್ಯವಸ್ಥೆ ಮಾಡಿಕೊಟ್ಟಿರಲಿಲ್ಲ. ಪಾವತಿಸಿದ ಹಣವನ್ನು ಹಿಂದಿರುಗಿಸುವಂತೆ ಕೇಳಿದರೂ ಕಂಪನಿ ಸ್ಪಂದಿಸಿರಲಿಲ್ಲ. ಹೀಗಾಗಿ ನ.25ರಂದು ರಾಷ್ಟ್ರೀಯ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸುವ ಕುರಿತು ಆನ್ಲೈನ್ನಲ್ಲಿ ಮಾಹಿತಿ ಹುಡುಕುತ್ತಿದ್ದರು.
ಈ ವೇಳೆ ಸುಮಿತ್ ಕುಮಾರ್ ಎಂಬ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ, ದೂರು ದಾಖಲಿಸಲು ₹5 ಪಾವತಿಸಬೇಕು ಎಂದು ತಿಳಿಸಿದ್ದಾರೆ. ಬಳಿಕ ವಾಟ್ಸ್ಆ್ಯಪ್ ಮೂಲಕ ಲಿಂಕ್ ಕಳುಹಿಸಿದ್ದು, ಇದನ್ನು ನಂಬಿದ ಹಿರಿಯ ವ್ಯಕ್ತಿ ಲಿಂಕ್ ತೆರೆದು ಹಣ ಪಾವತಿಸಿದ್ದಾರೆ.
ಆದರೆ ನ.26ರಂದು ಅವರ ಗಮನಕ್ಕೆ ಬಾರದಂತೆ ಹಂತ ಹಂತವಾಗಿ ನಾಲ್ಕು ಬ್ಯಾಂಕ್ ಖಾತೆಗಳಿಂದ ಒಟ್ಟು ₹3.23 ಲಕ್ಷ ಹಣವನ್ನು ಅಪರಿಚಿತ ಖಾತೆಗಳಿಗೆ ವರ್ಗಾಯಿಸಿಕೊಳ್ಳಲಾಗಿದೆ. ಖಾತೆಯಿಂದ ಹಣ ಕಡಿತವಾಗಿರುವುದನ್ನು ಗಮನಿಸಿದ ತಕ್ಷಣ ಬ್ಯಾಂಕ್ಗೆ ಕರೆ ಮಾಡಿದ ಅವರು ಖಾತೆಗಳನ್ನು ಬ್ಲಾಕ್ ಮಾಡಿಸಿದ್ದಾರೆ. ಬಳಿಕ ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ.
ನಕಲಿ ಲಿಂಕ್ ಕಳುಹಿಸಿ ಹಣ ವಂಚಿಸಿರುವ ಅಪರಿಚಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.


