
ಕಡಬ: ನಕಲಿ ಚಿನ್ನವನ್ನು ಅಸಲಿ ಎಂದು ಬ್ಯಾಂಕಿನಲ್ಲಿ ಅಡವಿಟ್ಟು 8.03 ಲಕ್ಷ ರೂ. ಸಾಲ ಪಡೆದು ವಂಚಿಸಿದ ಆರೋಪದ ಮೇಲೆ ಚಿನ್ನದ ಮೌಲ್ಯಮಾಪಕ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ನೂಜಿಬಾಳ್ತಿಲದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಈ ವಂಚನೆ ನಡೆದಿದೆ. ಪಿಜಕ್ಕಲದ ಲಕ್ಷ್ಮಿ ನಾರಾಯಣ, ಕಡಬದ ಕಂಗುಲೆ ನಿವಾಸಿ ಎ. ಸದಾನಂದ ಮತ್ತು ನೂಜಿಬಾಳ್ತಿಲದ ಬಳ್ಳೇರಿ ನಿವಾಸಿ ಸತ್ಯಾನಂದ ಗೌಡ ಆರೋಪಿಗಳು.
ಆರೋಪಿಗಳು ವಿವಿಧ ದಿನಗಳಲ್ಲಿ ನಕಲಿ ಚಿನ್ನದ ಆಭರಣಗಳನ್ನು ಬ್ಯಾಂಕಿನಲ್ಲಿ ಅಡವಿಟ್ಟು 8.03 ಲಕ್ಷ ರೂ. ಸಾಲ ಪಡೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಬ್ಯಾಂಕಿನ ಚಿನ್ನದ ಮೌಲ್ಯಮಾಪಕ ಲಕ್ಷ್ಮಿ ನಾರಾಯಣ ಅವರು ಇತರ ಆರೋಪಿಗಳೊಂದಿಗೆ ಸೇರಿಕೊಂಡು ನಕಲಿ ಚಿನ್ನವನ್ನು ಅಸಲಿ ಎಂದು ದೃಢೀಕರಿಸಿ ವಂಚನೆಗೆ ಸಹಕರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಬ್ಯಾಂಕ್ ಆಫ್ ಬರೋಡಾದ ಪುತ್ತೂರು ವಲಯದ ಸಹಾಯಕ ಪ್ರಧಾನ ವ್ಯವಸ್ಥಾಪಕ ಹಾಗೂ ಉಪ ಪ್ರಾದೇಶಿಕ ವ್ಯವಸ್ಥಾಪಕ ಯೋಗೇಶ್ ಎಸ್. ಅವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


