Thursday, November 26, 2026
Homeಕರಾವಳಿಮಂಗಳೂರುಮಂಗಳೂರು;ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ 2ನೇ ತರಗತಿ ಬಾಲಕನ ಮೇಲೆ ಬಸ್ ಹರಿದು ಸಾವು

ಮಂಗಳೂರು;ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ 2ನೇ ತರಗತಿ ಬಾಲಕನ ಮೇಲೆ ಬಸ್ ಹರಿದು ಸಾವು

- Advertisement -
- Advertisement -

ಮಂಗಳೂರು: ಶಾಲೆ ಮುಗಿಸಿ ಮನೆಗೆ ತೆರಳಲು ರಸ್ತೆ ದಾಟುತ್ತಿದ್ದ ಎರಡನೇ ತರಗತಿಯ ಏಳು ವರ್ಷದ ಬಾಲಕನ ಮೇಲೆ ಖಾಸಗಿ ಬಸ್ ಹರಿದು ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದಾರುಣ ಘಟನೆ ನಗರದ ಕಂಕನಾಡಿಯಲ್ಲಿ ನಡೆದಿದೆ.

ಕಂಕನಾಡಿಯ ಸೈಂಟ್ ಜೋಸೆಫ್ಸ್ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ, ಲಕ್ಷ್ಮೀ ಕಲಹಾಲ ಎಂಬುವವರ ಏಳು ವರ್ಷದ ಪುತ್ರ ಮೃತಪಟ್ಟ ಬಾಲಕ.

ನವೆಂಬರ್ 25ರಂದು ಸಂಜೆ ಸುಮಾರು 4.15ರ ವೇಳೆಗೆ ಶಾಲೆ ಬಿಟ್ಟ ಬಳಿಕ ಬಾಲಕ ಮನೆಗೆ ಹೋಗಲು ಶಾಲೆಯ ಎದುರಿನ ಕಂಕನಾಡಿ–ಫಳ್ನೀರ್ ರಸ್ತೆಯನ್ನು ದಾಟುತ್ತಿದ್ದ. ಈ ವೇಳೆ ಫಳ್ನೀರ್ ಕಡೆಗೆ ಸಂಚರಿಸಲು ನಿಂತಿದ್ದ ಖಾಸಗಿ ಬಸ್ ಚಾಲಕ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಏಕಾಏಕಿ ಬಸ್ಸನ್ನು ಬಲಕ್ಕೆ ತಿರುಗಿಸಿ ಚಲಾಯಿಸಿದ್ದಾನೆ ಎನ್ನಲಾಗಿದೆ.

ಬಸ್ಸಿನ ಬಲಭಾಗ ಡಿಕ್ಕಿ ಹೊಡೆದ ರಭಸಕ್ಕೆ ಬಾಲಕ ರಸ್ತೆಗೆ ಎಸೆಯಲ್ಪಟ್ಟಿದ್ದು, ಈ ವೇಳೆ ಬಸ್ಸಿನ ಬಲ ಹಿಂಬದಿಯ ಚಕ್ರ ಬಾಲಕನ ಮೇಲೆ ಹರಿದಿದೆ. ತೀವ್ರ ಗಾಯಗೊಂಡ ಬಾಲಕನನ್ನು ಚಾಲಕ ಹಾಗೂ ಸ್ಥಳೀಯರು ಕೂಡಲೇ ಸಮೀಪದ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಸಂಜೆ 5.50ರ ಸುಮಾರಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ತಮ್ಮ ಪುತ್ರನ ಸಾವಿಗೆ ಕಾರಣವಾದ ಖಾಸಗಿ ಬಸ್ ಚಾಲಕನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ತಾಯಿ ಲಕ್ಷ್ಮೀ ಕಲಹಾಲ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!