
ಬೆಳ್ತಂಗಡಿ: ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಬೆಳ್ತಂಗಡಿಯ 77 ವರ್ಷದ ನಿವೃತ್ತ ಅಂಚೆ ಅಧಿಕಾರಿಯೊಬ್ಬರು ಸಾಬೀತುಪಡಿಸಿದ್ದಾರೆ. ಸಮುದ್ರ ಮಟ್ಟದಿಂದ 1,700 ಅಡಿ ಎತ್ತರವಿರುವ, ಸುಮಾರು 1,800 ಮೆಟ್ಟಿಲುಗಳ ಕಡಿದಾದ ಗಡಾಯಿಕಲ್ಲನ್ನು ಕೇವಲ 1 ಗಂಟೆ 20 ನಿಮಿಷಗಳಲ್ಲಿ ಏರುವ ಮೂಲಕ ಉಜಿರೆ ನಿಡಿಗಲ್ ನಿವಾಸಿ ಅಬೂಬಕ್ಕರ್ ಅವರು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಭಾನುವಾರ ಬೆಳಿಗ್ಗೆ 9 ಗಂಟೆಗೆ ಗಡಾಯಿಕಲ್ಲು ಏರಲು ಆರಂಭಿಸಿದ ಅಬೂಬಕ್ಕರ್ ಅವರು, ಸರಿಯಾಗಿ 10.20ಕ್ಕೆ ಬೆಟ್ಟದ ತುದಿ ತಲುಪಿದ್ದಾರೆ. ಯುವಕರನ್ನೂ ನಾಚಿಸುವಂತಹ ಇವರ ಈ ಉತ್ಸಾಹ ಮತ್ತು ಫಿಟ್ನೆಸ್ ಕಂಡು ಬೆಟ್ಟಕ್ಕೆ ಆಗಮಿಸಿದ್ದ ಸ್ಥಳೀಯರು ಹಾಗೂ ಪ್ರವಾಸಿಗರು ಅಚ್ಚರಿ ವ್ಯಕ್ತಪಡಿಸಿ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.
ಶೇಖಬ್ಬ ಬ್ಯಾರಿ ಮತ್ತು ಬೀಫಾತಿಮಾ ದಂಪತಿಯ ಪುತ್ರರಾಗಿರುವ ಅಬೂಬಕ್ಕರ್ ಅವರು, ಅಂಚೆ ಇಲಾಖೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ನಿವೃತ್ತರಾಗಿದ್ದಾರೆ. ಸ್ಥಳೀಯವಾಗಿ ‘ನಿಡಿಗಲ್ ಕಾಕಾ’ ಎಂದೇ ಚಿರಪರಿಚಿತರಾಗಿರುವ ಇವರ ಈ ಸಾಹಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.


