Tuesday, November 24, 2026
Homeತಾಜಾ ಸುದ್ದಿಇನ್‌ಸ್ಟಾಗ್ರಾಂ ಜಾಹೀರಾತು ನಂಬಿ ಫೇರ್‌ನೆಸ್ ಕ್ರೀಮ್ ಬಳಕೆ: ಬಾಲಕಿಯ ಕಿಡ್ನಿಗೆ ಗಂಭೀರ ಹಾನಿ

ಇನ್‌ಸ್ಟಾಗ್ರಾಂ ಜಾಹೀರಾತು ನಂಬಿ ಫೇರ್‌ನೆಸ್ ಕ್ರೀಮ್ ಬಳಕೆ: ಬಾಲಕಿಯ ಕಿಡ್ನಿಗೆ ಗಂಭೀರ ಹಾನಿ

- Advertisement -
- Advertisement -

ಕೇರಳ: ಸಾಮಾಜಿಕ ಜಾಲತಾಣಗಳಲ್ಲಿ ಇನ್‌ಫ್ಲುಯೆನ್ಸರ್‌ಗಳ ಪ್ರಚಾರವನ್ನು ನಂಬಿ ಆನ್‌ಲೈನ್ ಮೂಲಕ ಸೌಂದರ್ಯವರ್ಧಕ ಉತ್ಪನ್ನಗಳನ್ನು ಖರೀದಿಸಿ ಬಳಸುತ್ತಿರುವವರಿಗೆ ಎಚ್ಚರಿಕೆಯ ಗಂಟೆಯಂತಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಇನ್‌ಸ್ಟಾಗ್ರಾಂ ಜಾಹೀರಾತು ನೋಡಿ ಫೇರ್‌ನೆಸ್ ಕ್ರೀಮ್ ಬಳಸಿದ 17 ವರ್ಷದ ಬಾಲಕಿಯೊಬ್ಬಳು ಗಂಭೀರ ಮೂತ್ರಪಿಂಡ ಕಾಯಿಲೆಗೆ ತುತ್ತಾಗಿದ್ದು, ಕೇರಳದ ಮಲಪ್ಪುರಂನಲ್ಲಿ ಈ ಪ್ರಕರಣ ತೀವ್ರ ಆತಂಕ ಸೃಷ್ಟಿಸಿದೆ.

ಮೊಡವೆ, ಕಪ್ಪು ಕಲೆ ಹಾಗೂ ಪಿಗ್ಮೆಂಟೇಷನ್ ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ಆಕರ್ಷಕ ಜಾಹೀರಾತನ್ನು ನಂಬಿದ ಬಾಲಕಿ, ಕಳೆದ ಸುಮಾರು ಒಂದು ವರ್ಷದಿಂದ ನಿರಂತರವಾಗಿ ಆ ಫೇರ್‌ನೆಸ್ ಕ್ರೀಮ್ ಬಳಸುತ್ತಿದ್ದಳು. ಇತ್ತೀಚೆಗೆ ಬಾಲಕಿಯ ಕಾಲುಗಳಲ್ಲಿ ಊತ, ರಕ್ತದೊತ್ತಡದಲ್ಲಿ ಏರುಪೇರು ಹಾಗೂ ಪ್ರಜ್ಞೆ ತಪ್ಪುವಂತಹ ಗಂಭೀರ ಆರೋಗ್ಯ ಲಕ್ಷಣಗಳು ಕಾಣಿಸಿಕೊಂಡಿದ್ದವು. ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಬಾಲಕಿಯ ದೇಹದಲ್ಲಿ ಅಪಾಯಕಾರಿ ಪ್ರಮಾಣದ ಪಾದರಸ (ಮರ್ಕ್ಯುರಿ) ಸೇರಿರುವುದು ಪತ್ತೆಯಾಗಿದೆ.

12,500 ಪಟ್ಟು ಹೆಚ್ಚು ವಿಷಕಾರಿ ಪಾದರಸ: ಬಾಲಕಿ ಬಳಸುತ್ತಿದ್ದ ಕ್ರೀಮ್ ಅನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಆಘಾತಕಾರಿ ಅಂಶ ಬಯಲಾಗಿದೆ. ನಿಯಮದ ಪ್ರಕಾರ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಪಾದರಸದ ಅನುಮತಿಸಲಾದ ಮಿತಿ 1 PPMಗಿಂತ ಕಡಿಮೆ ಇರಬೇಕು. ಆದರೆ, ಈ ಕ್ರೀಮ್‌ನಲ್ಲಿ ಬರೋಬ್ಬರಿ 12,500 PPM ಪ್ರಮಾಣದ ಪಾದರಸ ಪತ್ತೆಯಾಗಿದ್ದು, ನಿಗದಿತ ಮಿತಿಗಿಂತ ಹಲವು ಸಾವಿರ ಪಟ್ಟು ಹೆಚ್ಚಾಗಿರುವುದು ದೃಢಪಟ್ಟಿದೆ.

ಕಿಡ್ನಿ ಕಾರ್ಯನಿರ್ವಹಣೆಗೆ ಧಕ್ಕೆ: ಪಾದರಸದಂತಹ ವಿಷಕಾರಿ ಲೋಹಗಳು ನಿರಂತರವಾಗಿ ದೇಹವನ್ನು ಸೇರಿದ ಪರಿಣಾಮ ಬಾಲಕಿಯ ಕಿಡ್ನಿಯ ಫಿಲ್ಟರಿಂಗ್ ಘಟಕಗಳಿಗೆ ತೀವ್ರ ಹಾನಿಯಾಗಿದೆ. ಇದರಿಂದಾಗಿ ಬಾಲಕಿಗೆ ‘ಮೆಂಬ್ರೇನಸ್ ನೆಫ್ರೋಪತಿ’ ಎಂಬ ಗಂಭೀರ ಕಿಡ್ನಿ ಕಾಯಿಲೆ ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅನುಮತಿಯಿಲ್ಲದ ಹಾಗೂ ಗುಣಮಟ್ಟದ ಪರೀಕ್ಷೆಗೊಳಪಡದ ಆನ್‌ಲೈನ್ ಸೌಂದರ್ಯ ಉತ್ಪನ್ನಗಳ ಬಳಕೆ ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

- Advertisement -

Latest News

error: Content is protected !!