Tuesday, November 24, 2026
Homeಕರಾವಳಿಮಂಗಳೂರುಮಂಗಳೂರು;ಬಸ್ ಅಪಘಾತ ಪ್ರಕರಣ: ಬಾಲಕನ ಸಾವಿಗೆ ಕಾರಣವಾದ ಚಾಲಕನಿಗೆ 1 ವರ್ಷ ಜೈಲು ಶಿಕ್ಷೆ

ಮಂಗಳೂರು;ಬಸ್ ಅಪಘಾತ ಪ್ರಕರಣ: ಬಾಲಕನ ಸಾವಿಗೆ ಕಾರಣವಾದ ಚಾಲಕನಿಗೆ 1 ವರ್ಷ ಜೈಲು ಶಿಕ್ಷೆ

- Advertisement -
- Advertisement -

ಮಂಗಳೂರು: ನಗರದ ಬೆಂದೂರ್‌ವೆಲ್ ಜಂಕ್ಷನ್‌ನಲ್ಲಿ 2023ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಾಲಕನೊಬ್ಬನ ಸಾವಿಗೆ ಕಾರಣನಾಗಿದ್ದ ಖಾಸಗಿ ಬಸ್ ಚಾಲಕನಿಗೆ ಮಂಗಳೂರಿನ 8ನೇ ಜೆಎಂಎಫ್‌ಸಿ ನ್ಯಾಯಾಲಯವು 1 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಬಸ್ ಚಾಲಕ ಪ್ರಶಾಂತ್ ಮಾರ್ಲ ಶಿಕ್ಷೆಗೆ ಗುರಿಯಾದ ಅಪರಾಧಿ.

ಪ್ರಕರಣದ ವಿವರ: 2023ರ ಮಾರ್ಚ್ 24ರಂದು ನಗರದ ಬೆಂದೂರ್‌ವೆಲ್ ಜಂಕ್ಷನ್ ಬಳಿ ಈ ದುರ್ಘಟನೆ ಸಂಭವಿಸಿತ್ತು. ಕರಾವಳಿ ಜಂಕ್ಷನ್ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ಸನ್ನು ಚಾಲಕ ಪ್ರಶಾಂತ್ ಮಾರ್ಲ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದ. ಬೆಂದೂರ್‌ವೆಲ್ ಜಂಕ್ಷನ್‌ನಲ್ಲಿ ನಿಂತಿದ್ದ ಮತ್ತೊಂದು ಬಸ್ಸನ್ನು ಓವರ್‌ಟೇಕ್ ಮಾಡುವ ಭರದಲ್ಲಿ, ಪಕ್ಕದಲ್ಲೇ ತಾಯಿ ಮತ್ತು ಮಗ ಸಂಚರಿಸುತ್ತಿದ್ದ ಸ್ಕೂಟರ್‌ಗೆ ಬಸ್ ಡಿಕ್ಕಿ ಹೊಡೆದಿತ್ತು.

ಅಪಘಾತದ ತೀವ್ರತೆಗೆ ಸ್ಕೂಟರ್ ಸವಾರರಾಗಿದ್ದ ಮಹಿಳೆ ಸ್ವಾತಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಅವರ ಪುತ್ರ ಹಾರ್ದಿಕ್ ಕುಮಾರ್ ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು. ತಕ್ಷಣವೇ ಬಾಲಕನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಹಾರ್ದಿಕ್ ಕೊನೆಯುಸಿರೆಳೆದಿದ್ದರು.

ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿಯಾಗಿದ್ದ ಪೊಲೀಸ್ ನಿರೀಕ್ಷಕ ಗೋಪಾಲಕೃಷ್ಣ ಭಟ್ ಬಿ. ಅವರು ಸಮಗ್ರ ತನಿಖೆ ನಡೆಸಿ, ಚಾಲಕನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 8ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮೋನಿಷಾ ಆರ್. ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಚಾಲಕನಿಗೆ 1 ವರ್ಷ ಕಾರಾಗೃಹ ವಾಸ ಮತ್ತು 10,000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ಗೀತಾ ರೈ ಹಾಗೂ ಅರೋನ್ ಡಿ’ಸೋಜಾ ವಿಟ್ಲ ಸಾಕ್ಷಿ ವಿಚಾರಣೆ ನಡೆಸಿದ್ದು, ಜನಾರ್ದನ ಬಿ. ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.

- Advertisement -

Latest News

error: Content is protected !!