
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಕುಸಿದಿರುವುದರಿಂದ ಚಿನ್ನ ಅಡವಿಟ್ಟು ಸಾಲ ಪಡೆದಿರುವ ಗ್ರಾಹಕರಿಗೆ ಸಂಕಷ್ಟ ಎದುರಾಗಿದೆ. ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಚಿನ್ನದ ಆಭರಣಗಳನ್ನು ಅಡವಿಟ್ಟು ಸಾಲ ಪಡೆದವರಿಗೆ ಹೆಚ್ಚುವರಿ ಚಿನ್ನ ಅಡವಿಡುವಂತೆ ಅಥವಾ ಸಾಲದ ಒಂದು ಭಾಗವನ್ನು ಮರುಪಾವತಿಸುವಂತೆ ನೋಟಿಸ್ ನೀಡಲಾಗುತ್ತಿದೆ.
ಚಿನ್ನದ ಬೆಲೆ ಇಳಿಕೆಯಾಗಿರುವುದರಿಂದ ಸಾಲ ಪಡೆಯುವ ಸಮಯದಲ್ಲಿ ಅಡವಿಟ್ಟಿದ್ದ ಆಭರಣಗಳ ಮಾರುಕಟ್ಟೆ ಮೌಲ್ಯವೂ ಕಡಿಮೆಯಾಗಿದೆ. ಇದರಿಂದ ಸಾಲದ ಮೊತ್ತಕ್ಕೂ ಅಡವಿಟ್ಟ ಚಿನ್ನದ ಮೌಲ್ಯಕ್ಕೂ ಇರುವ ಅನುಪಾತದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಸಾಲಕ್ಕೆ ನೀಡಿರುವ ಭದ್ರತೆಯ ಮೌಲ್ಯ ನಿಗದಿತ ಮಟ್ಟಕ್ಕಿಂತ ಕಡಿಮೆಯಾದರೆ ಬ್ಯಾಂಕ್‌ಗಳು ಗ್ರಾಹಕರಿಗೆ ಮಾರ್ಜಿನ್ ಕಾಲ್ ನೀಡಬಹುದು.
ಮಾರ್ಜಿನ್ ಕಾಲ್ ಎಂದರೇನು?; ಚಿನ್ನ ಅಡವಿಟ್ಟು ಪಡೆದ ಸಾಲಕ್ಕೆ ಭದ್ರತೆಯಾಗಿ ನೀಡಿರುವ ಚಿನ್ನದ ಬೆಲೆ ಕುಸಿದಾಗ, ಅದರ ಬದಲಾಗಿ ಹೆಚ್ಚುವರಿ ಚಿನ್ನ ಅಡವಿಡಬೇಕು ಅಥವಾ ಬಾಕಿ ಸಾಲದ ಒಂದು ಭಾಗವನ್ನು ಪಾವತಿಸಬೇಕು ಎಂದು ಬ್ಯಾಂಕ್ ಸೂಚಿಸುವುದನ್ನೇ ಮಾರ್ಜಿನ್ ಕಾಲ್ ಎನ್ನಲಾಗುತ್ತದೆ.
ಅಡವಿಟ್ಟ ಚಿನ್ನ ಹರಾಜಾಗುವ ಸಾಧ್ಯತೆ!; ಬ್ಯಾಂಕ್‌ಗಳು ನೀಡುವ ನೋಟಿಸ್‌ಗೆ ಗ್ರಾಹಕರು ಸೂಕ್ತವಾಗಿ ಸ್ಪಂದಿಸದೆ, ಹೆಚ್ಚುವರಿ ಭದ್ರತೆ ಒದಗಿಸದಿದ್ದರೆ ಅಥವಾ ಸಾಲದ ಬಾಕಿ ಪಾವತಿಸದಿದ್ದರೆ, ಸಾಲದ ಒಪ್ಪಂದದ ನಿಯಮಗಳ ಪ್ರಕಾರ ಅಡವಿಟ್ಟ ಚಿನ್ನವನ್ನು ಹರಾಜು ಮಾಡುವ ಸಾಧ್ಯತೆಯಿದೆ. ಹೀಗಾಗಿ ಗೋಲ್ಡ್ ಲೋನ್ ಪಡೆದಿರುವ ಗ್ರಾಹಕರು ಬ್ಯಾಂಕ್‌ನಿಂದ ಬರುವ ಸಂದೇಶ ಹಾಗೂ ನೋಟಿಸ್‌ಗಳನ್ನು ನಿರ್ಲಕ್ಷಿಸದೆ, ತಮ್ಮ ಸಾಲದ ಖಾತೆಯ ಸ್ಥಿತಿಯನ್ನು ಪರಿಶೀಲಿಸುವುದು ಅಗತ್ಯವಾಗಿದೆ.


