
ಸಮುದ್ರದಲ್ಲಿ ಈಜಲು ಇಳಿದಿದ್ದ ಐವರು ವಿದ್ಯಾರ್ಥಿಗಳ ಪೈಕಿ ಇಬ್ಬರು ಅಲೆಗಳ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದು, ಮೂವರನ್ನು ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಭಾನುವಾರ ಸಂಜೆ ಕಾಪು ಲೈಟ್‌ಹೌಸ್ ಬಳಿಯ ಕಡಲತೀರದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾವಿನಕೊಪ್ಪ ನಿವಾಸಿ ಅಲ್ತಾಫ್ ಅವರ ಪುತ್ರ ಸಮೀರ್ (20) ಹಾಗೂ ದಾವಣಗೆರೆ ಜಿಲ್ಲೆಯ ಅಹಮದ್ ನಗರ ನಿವಾಸಿ ಜಿಯಾವುಲ್ಲಾ ಅವರ ಪುತ್ರ ಮಲ್ಲಿಕ್ ರಿಹಾನ್ (15) ನಾಪತ್ತೆಯಾದ ದುರ್ದೈವಿಗಳು. ಸಮೀರ್ ಕುಂದಾಪುರದ ಮೂಡ್ಲಕಟ್ಟೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ (AI & ML) ವ್ಯಾಸಂಗ ಮಾಡುತ್ತಿದ್ದರೆ, ಮಲ್ಲಿಕ್ ರಿಹಾನ್ ದಾವಣಗೆರೆಯ ಗುರುಕುಲ ರೆಸಿಡೆನ್ಸಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.
ಘಟನೆಯ ವಿವರ: ವಿವಿಧ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹೊರ ಜಿಲ್ಲೆಗಳ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ರವಿವಾರ ಸಂಜೆ ಕಾಪು ಬೀಚ್‌ಗೆ ವಿಹಾರಕ್ಕೆ ಬಂದಿದ್ದರು. ಈ ವೇಳೆ ಐವರು ವಿದ್ಯಾರ್ಥಿಗಳು ಸಮುದ್ರಕ್ಕೆ ಇಳಿದಿದ್ದು, ರಕ್ಕಸ ಅಲೆಗಳ ಸೆಳೆತಕ್ಕೆ ಸಿಲುಕಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು, ಮೀನುಗಾರರು, ಲೈಫ್‌ಗಾರ್ಡ್‌ಗಳು ಹಾಗೂ ಕರಾವಳಿ ಕಾವಲುಪಡೆ ಸಿಬ್ಬಂದಿ ದಾವಣಗೆರೆ ನಿವಾಸಿಗಳಾದ ಮಹಮ್ಮದ್ ಜಾಫರ್‌ಸಾದಿಕ್ (20), ಮಹಮ್ಮದ್ ಇಸಾಕ್ (13) ಹಾಗೂ ವಿಜಯಪುರದ ಮಹಮ್ಮದ್ ಯೂಸುಫ್ (19) ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದು ರಕ್ಷಿಸಿದ್ದಾರೆ. ಆದರೆ, ಸಮೀರ್ ಮತ್ತು ಮಲ್ಲಿಕ್ ರಿಹಾನ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಮುಂದುವರಿದ ಶೋಧ ಕಾರ್ಯಾಚರಣೆ: ನಾಪತ್ತೆಯಾದ ಇಬ್ಬರು ವಿದ್ಯಾರ್ಥಿಗಳ ಪತ್ತೆಗಾಗಿ ಮುಳುಗುತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ, ಸ್ಥಳೀಯ ಮೀನುಗಾರರು, ಲೈಫ್‌ಗಾರ್ಡ್‌ಗಳು, ಕರಾವಳಿ ಕಾವಲುಪಡೆ ಹಾಗೂ ಬೀಚ್ ನಿರ್ವಹಣಾ ಸಮಿತಿ ಸಿಬ್ಬಂದಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಾಪು ಠಾಣಾ ಎಸ್‌ಐ ತೇಜಸ್ವಿ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದು, ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಯಿಂದಾಗಿ ಕಾಪು ಬೀಚ್ ಪರಿಸರದಲ್ಲಿ ಆತಂಕದ ಛಾಯೆ ಆವರಿಸಿದೆ. ಕಣ್ಣೆದುರೇ ಮಕ್ಕಳು ಕಾಣೆಯಾದ ಹಿನ್ನೆಲೆಯಲ್ಲಿ ಪೋಷಕರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬೀಚ್‌ನಲ್ಲಿ ಸಾವಿರಾರು ಜನರು ಜಮಾಯಿಸಿದ್ದಾರೆ.


