
ಬೆಂಗಳೂರು: ತುಳು ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ, ನಟ ಹಾಗೂ ಬರಹಗಾರ ಸೂರಜ್ ಬೋಳಾರ್ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರ ಹಠಾತ್ ಅಗಲಿಕೆ ಕರಾವಳಿ ಚಿತ್ರರಂಗ, ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟುಮಾಡಿದೆ.
ದಿವಂಗತ ಆನಂದ ಬೋಳಾರ್ ಅವರ ಪುತ್ರರಾಗಿದ್ದ ಸೂರಜ್, ತಮ್ಮ ವಿಭಿನ್ನ ನಿರ್ದೇಶನ ಶೈಲಿಯ ಮೂಲಕ ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ವಿಶೇಷ ಛಾಪು ಮೂಡಿಸಿದ್ದರು. ವಿಶೇಷವಾಗಿ ‘ಪತ್ತೀಸ್ ಗ್ಯಾಂಗ್’ ಮತ್ತು ‘ರಾಹುಕಾಲ ಗುಳಿಗಕಾಲ’ ಎಂಬ ತುಳು ಚಲನಚಿತ್ರಗಳನ್ನು ನಿರ್ದೇಶಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸಿನಿಮಾ ನಿರ್ದೇಶನ, ನಟನೆ ಮತ್ತು ಬರವಣಿಗೆಯ ಜೊತೆಗೆ ರೇಡಿಯೋ ಹಾಗೂ ಮಾಧ್ಯಮ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದ ಅವರು ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದರು.
ಇಂದು ಅಂತ್ಯಕ್ರಿಯೆ: ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನವೆಂಬರ್ 23ರ ಸೋಮವಾರ ಬೆಳಿಗ್ಗೆ 10ರಿಂದ 11 ಗಂಟೆಯವರೆಗೆ ಬೆಂಗಳೂರಿನ ಅಂದ್ರಹಳ್ಳಿ ಮುಖ್ಯರಸ್ತೆಯಲ್ಲಿರುವ ಅವರ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಳಿಕ ಕಾಮಾಕ್ಷಿಪಾಳ್ಯದ ಔಟರ್ ರಿಂಗ್ ರಸ್ತೆಯಲ್ಲಿರುವ ಸುಮನಹಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.


