Monday, November 23, 2026
Homeಅಪರಾಧಸಾಲದ ಇಎಂಐ ಕಟ್ಟಲು ಸ್ನೇಹಿತನನ್ನೇ ಕೊಂದ ಯುವಕ; ಆರೋಪಿಯ ಬಂಧನ

ಸಾಲದ ಇಎಂಐ ಕಟ್ಟಲು ಸ್ನೇಹಿತನನ್ನೇ ಕೊಂದ ಯುವಕ; ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು: ಬಜಪೆ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ಯುವಕನ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಕೊಲೆ ಆರೋಪದ ಮೇಲೆ ಮೃತನ ಸ್ನೇಹಿತ ಹಾಗೂ ಉತ್ತರ ಪ್ರದೇಶ ಮೂಲದ ಶ್ರವಣ್ ಎಂಬಾತನನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಮನೀಶ್ ಶರ್ಮಾ (25) ಅಕ್ಟೋಬರ್ 27ರಂದು ನಾಪತ್ತೆಯಾಗಿದ್ದರು. ನವೆಂಬರ್ 13ರಂದು ಹಳೆ ಏರ್‌ಪೋರ್ಟ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ಅವರ ಮೃತದೇಹ ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಶ್ರವಣ್‌ಗೆ ಸಾಲದ ಇಎಂಐ ಕಟ್ಟಲು ಹಣದ ಅಗತ್ಯವಿತ್ತು. ಮನೀಶ್ ಬಳಿ ಹಣವಿರುವುದನ್ನು ತಿಳಿದಿದ್ದ ಆತ, ಹಣ ಪಡೆಯುವ ಉದ್ದೇಶದಿಂದ ಊಟಕ್ಕೆಂದು ಕರೆದುಕೊಂಡು ಹೋಗಿ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ. ಬಳಿಕ ಮನೀಶ್ ಅವರ ಬ್ಯಾಂಕ್ ಖಾತೆಯಲ್ಲಿದ್ದ 63,720 ರೂ.ಗಳನ್ನು ಮತ್ತೊಬ್ಬ ವ್ಯಕ್ತಿಯ ಮೂಲಕ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.

ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಮನೀಶ್ ಮತ್ತು ಶ್ರವಣ್ ಒಟ್ಟಿಗೆ ಹೋಗಿರುವುದು ಹಾಗೂ ಬಳಿಕ ಶ್ರವಣ್ ಒಬ್ಬನೇ ವಾಪಸ್ ಬಂದಿರುವುದು ಕಂಡುಬಂದಿತ್ತು. ಈ ಸುಳಿವಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಉತ್ತರ ಪ್ರದೇಶದ ಖುಷಿನಗರಕ್ಕೆ ಪರಾರಿಯಾಗಿದ್ದ ಶ್ರವಣ್‌ನನ್ನು ಬಂಧಿಸಿ ಮಂಗಳೂರಿಗೆ ಕರೆತಂದಿದ್ದಾರೆ. ಮೃತದೇಹದ ಬಳಿ ಪತ್ತೆಯಾದ ಬಟ್ಟೆಗಳನ್ನು ಮನೀಶ್ ಅವರ ಸಹೋದರ ಗುರುತಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದಿದ್ದ ಆರೋಪಿಯನ್ನು ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಸೋಮವಾರ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

- Advertisement -

Latest News

error: Content is protected !!