
ಕಾರ್ಕಳ: ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಕಾಡುಹೊಳೆ ನಿವಾಸಿ ಸಚ್ಚಿದಾನಂದ ಪ್ರಭು ಅವರು ಭಾರತೀಯ ಭೂಸೇನೆಯ ಮೇಜರ್ ಜನರಲ್ ಹುದ್ದೆಗೆ ಪದೋನ್ನತಿ ಪಡೆದಿದ್ದಾರೆ. 29 ವರ್ಷಗಳಿಂದ ಭೂಸೇನೆಯ ನ್ಯಾಯಾಂಗ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಅವರು, ಜಡ್ಜ್ ಅಡ್ವಕೇಟ್ ಜನರಲ್ ಆಗಿಯೂ ನೇಮಕಗೊಳ್ಳಲಿದ್ದಾರೆ. ಈ ಮೂಲಕ ಭೂಸೇನೆಯ ನ್ಯಾಯಾಂಗ ವಿಭಾಗದಲ್ಲಿ ಮೇಜರ್ ಜನರಲ್ ಹುದ್ದೆ ಪಡೆದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
1972ರಲ್ಲಿ ಕಾಡುಹೊಳೆ ಕೊಪ್ಪಲದ ದಿವಂಗತ ಬಾಬುರಾಯ ಪ್ರಭು ಮತ್ತು ರತ್ನಮ್ಮ ದಂಪತಿಯ ಪುತ್ರನಾಗಿ ಜನಿಸಿದ ಸಚ್ಚಿದಾನಂದ ಪ್ರಭು ಅವರು ಕಾಡುಹೊಳೆ ಸರ್ಕಾರಿ ಶಾಲೆ ಹಾಗೂ ಅಜೆಕಾರು ಜ್ಯೋತಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರು. ಬಳಿಕ ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಉಡುಪಿಯ ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ಎಲ್ಎಲ್ಬಿ ಪದವಿ ಪಡೆದರು.
1997ರಲ್ಲಿ ಭಾರತೀಯ ಭೂಸೇನೆಗೆ ಲೆಫ್ಟಿನೆಂಟ್ ಆಗಿ ಸೇರ್ಪಡೆಗೊಂಡ ಅವರು, ನ್ಯಾಯಾಂಗ ವಿಭಾಗದಲ್ಲಿ ಸೇವೆ ಆರಂಭಿಸಿದರು. 1999ರ ಕಾರ್ಗಿಲ್ ಯುದ್ಧದಲ್ಲಿಯೂ ಭಾಗವಹಿಸಿದ್ದರು. ಸೇನಾ ಪ್ರಧಾನ ಕಚೇರಿಯಲ್ಲಿ ಕರ್ನಲ್ ಮಿಲಿಟರಿ ಸೆಕ್ರೆಟರಿಯಾಗಿ ಹಾಗೂ ಪಶ್ಚಿಮ ಮತ್ತು ಕೇಂದ್ರ ಕಮಾಂಡ್ಗಳಲ್ಲಿ ಡೆಪ್ಯೂಟಿ ಜಡ್ಜ್ ಅಡ್ವಕೇಟ್ ಜನರಲ್ ಆಗಿ ಕೆಲಸ ಮಾಡಿದ್ದಾರೆ. ದೇಶದ ವಿವಿಧ ರಾಜ್ಯಗಳ ಮಿಲಿಟರಿ ನ್ಯಾಯಾಲಯಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ದೆಹಲಿಯಲ್ಲಿ ನೆಲೆಸಿದ್ದಾರೆ.


