Thursday, November 19, 2026
Homeತಾಜಾ ಸುದ್ದಿತಮಿಳುನಾಡು: ಶಾಲೆಯಲ್ಲಿ 3 ವರ್ಷದ ಬಾಲಕನ ಕೈಕಟ್ಟಿ, ವಿನೈಲ್ ಶೀಟ್ ಸುತ್ತಿ ಕ್ರೌರ್ಯ; ಶಿಕ್ಷಕಿ, ಆಯಾ...

ತಮಿಳುನಾಡು: ಶಾಲೆಯಲ್ಲಿ 3 ವರ್ಷದ ಬಾಲಕನ ಕೈಕಟ್ಟಿ, ವಿನೈಲ್ ಶೀಟ್ ಸುತ್ತಿ ಕ್ರೌರ್ಯ; ಶಿಕ್ಷಕಿ, ಆಯಾ ವಜಾ

- Advertisement -
- Advertisement -

ತಮಿಳುನಾಡು: ತರಗತಿಯಲ್ಲಿ ತುಂಟಾಟ ಮಾಡುತ್ತಿದ್ದ ಎಂಬ ಕಾರಣಕ್ಕೆ ಮೂರು ವರ್ಷದ ಪ್ರೀ-ಕೆಜಿ ವಿದ್ಯಾರ್ಥಿಯ ಕೈಗಳನ್ನು ಹಗ್ಗದಿಂದ ಕಟ್ಟಿ, ವಿನೈಲ್ ಶೀಟ್ ಸುತ್ತಿ ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆ ತಮಿಳುನಾಡಿನ ತಿರುವರೂರ್ ಜಿಲ್ಲೆಯ ತಿರುತುರೈಪೂಂಡಿಯ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.

ನವೆಂಬರ್ 16ರಂದು ಸಂಜೆ ಶಾಲೆಯಿಂದ ಮನೆಗೆ ಮರಳಿದ ಮಗುವಿನ ಮುಖ, ಕಣ್ಣಿನ ಬಳಿ ಹಾಗೂ ಮೈಮೇಲೆ ಗಾಯಗಳಾಗಿರುವುದನ್ನು ಪೋಷಕರು ಗಮನಿಸಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ, ಶಾಲೆಯ ಶಿಕ್ಷಕಿ ಹಾಗೂ ಆಯಾ ಹೊಡೆದಿದ್ದಾರೆ ಎಂದು ಬಾಲಕ ಅಳುತ್ತಾ ತಿಳಿಸಿದ್ದಾನೆ.

ತಕ್ಷಣವೇ ಶಾಲೆಗೆ ತೆರಳಿದ ಬಾಲಕನ ತಂದೆ, ತರಗತಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸಿಬ್ಬಂದಿಯ ಕ್ರೌರ್ಯ ಬಯಲಾಗಿದೆ. ಮಗುವನ್ನು ವಿನೈಲ್ ಶೀಟ್‌ನಲ್ಲಿ ಸುತ್ತಿ ಕೈಗಳನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಿಹಾಕಿರುವುದು, ಎದ್ದು ನಿಲ್ಲಲಾಗದೆ ಒದ್ದಾಡುತ್ತಿದ್ದ ಬಾಲಕ ತನ್ನ ಹಲ್ಲುಗಳಿಂದ ಹಗ್ಗವನ್ನು ಕಚ್ಚಿ ಬಿಡಿಸಿಕೊಳ್ಳಲು ಯತ್ನಿಸುತ್ತಿರುವುದು ಹಾಗೂ ಸಹಪಾಠಿಗಳ ಮುಂದೆಯೇ ಪ್ರಾಣಭಯದಿಂದ ಕಿರುಚುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಗು ಮಾತು ಕೇಳುತ್ತಿರಲಿಲ್ಲ ಎಂಬ ಕಾರಣಕ್ಕೆ ಆಯಾ ಕಟ್ಟಿಹಾಕಿದ್ದು, ಶಿಕ್ಷಕಿ ಏನೂ ಮಾಡದೆ ಮೂಕಪ್ರೇಕ್ಷಕಿಯಾಗಿ ನಿಂತಿದ್ದರು ಎನ್ನಲಾಗಿದೆ. ಕಟ್ಟಿಹಾಕಿದ್ದರಿಂದ ಆಯತಪ್ಪಿ ಬಿದ್ದ ಮಗುವಿನ ಕಣ್ಣಿನ ಬಳಿ ಗಾಯವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪೋಷಕರ ದೂರಿನ ಮೇರೆಗೆ ತಿರುತುರೈಪೂಂಡಿ ಪೊಲೀಸರು ನ. 17ರಂದು ಶಿಕ್ಷಕಿ ಮತ್ತು ಆಯಾ ವಿರುದ್ಧ ಹಲ್ಲೆ, ಅಕ್ರಮ ಬಂಧನ ಹಾಗೂ ಮಕ್ಕಳ ಮೇಲಿನ ಕ್ರೌರ್ಯದಡಿ ಎಫ್‌ಐಆರ್ ದಾಖಲಿಸಿದ್ದಾರೆ. ಇತ್ತ ಶಾಲಾ ಆಡಳಿತ ಮಂಡಳಿ ಇಬ್ಬರನ್ನೂ ಕೆಲಸದಿಂದ ವಜಾಗೊಳಿಸಿದ್ದು, ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ.

- Advertisement -

Latest News

error: Content is protected !!