Thursday, November 19, 2026
Homeಪ್ರಮುಖ-ಸುದ್ದಿಕೇಂದ್ರದ ಸಬ್ಸಿಡಿ ಸ್ಥಗಿತವಾಗುತ್ತಿದ್ದಂತೆ ವಿಮಾನಯಾನ ಸಂಸ್ಥೆಗಳ ಹಿಂದೇಟು; ದೇಶದ 14ಕ್ಕೂ ಹೆಚ್ಚು ಉಡಾನ್ ವಿಮಾನ ನಿಲ್ದಾಣಗಳಲ್ಲಿ...

ಕೇಂದ್ರದ ಸಬ್ಸಿಡಿ ಸ್ಥಗಿತವಾಗುತ್ತಿದ್ದಂತೆ ವಿಮಾನಯಾನ ಸಂಸ್ಥೆಗಳ ಹಿಂದೇಟು; ದೇಶದ 14ಕ್ಕೂ ಹೆಚ್ಚು ಉಡಾನ್ ವಿಮಾನ ನಿಲ್ದಾಣಗಳಲ್ಲಿ ಸೇವೆ ಬಂದ್!

- Advertisement -
- Advertisement -

ನವದೆಹಲಿ: ಕಡಿಮೆ ದರದಲ್ಲಿ ವಿಮಾನ ಪ್ರಯಾಣ ಮಾಡಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಆರಂಭಿಸಿದ್ದ ‘ಉಡಾನ್’ (UDAN) ಯೋಜನೆಗೆ ಹಿನ್ನಡೆಯಾಗಿದೆ. ಯೋಜನೆಯಡಿ ಆರಂಭಿಸಲಾಗಿದ್ದ ದೇಶದ ಹಲವು ಪ್ರಾದೇಶಿಕ ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟ ಸ್ಥಗಿತಗೊಂಡಿದೆ.

ಕೇಂದ್ರ ಸರ್ಕಾರ ನೀಡುತ್ತಿದ್ದ ಮೂರು ವರ್ಷಗಳ ಸಬ್ಸಿಡಿ ಅವಧಿ ಮುಗಿದ ಬಳಿಕ, ದೇಶದ ಕನಿಷ್ಠ 14ರಿಂದ 20 ವಿಮಾನ ನಿಲ್ದಾಣಗಳಲ್ಲಿ ವಾಣಿಜ್ಯ ವಿಮಾನ ಸೇವೆಗಳು ಸಂಪೂರ್ಣವಾಗಿ ನಿಂತಿವೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ನೀಡಿರುವ ಅಂಕಿಅಂಶಗಳ ಪ್ರಕಾರ, ನವೆಂಬರ್ 13ರ ವೇಳೆಗೆ ಪಾಸಿಘಾಟ್, ತೇಜ್‌ಪುರ, ಕಾಂಡ್ಲಾ, ಲುಧಿಯಾನ, ಪಠಾಣ್‌ಕೋಟ್, ಅಲಿಗಢ, ಅಜಮ್‌ಗಢ, ಚಿತ್ರಕೂಟ, ಕುಶಿನಗರ ಸೇರಿದಂತೆ ಹಲವು ವಿಮಾನ ನಿಲ್ದಾಣಗಳಲ್ಲಿ ನಿಗದಿತ ವಿಮಾನ ಸೇವೆಗಳು ಇರಲಿಲ್ಲ. ಇವುಗಳಲ್ಲಿ ಹೆಚ್ಚಿನ ವಿಮಾನ ನಿಲ್ದಾಣಗಳು ಉತ್ತರ ಪ್ರದೇಶದಲ್ಲಿವೆ.

ವಿಮಾನಯಾನ ಸಂಸ್ಥೆಗಳು ಸರ್ಕಾರದಿಂದ ಮೂರು ವರ್ಷಗಳ ಕಾಲ ಸಬ್ಸಿಡಿ ಪಡೆದು ಸೇವೆ ಆರಂಭಿಸಿದ್ದವು. ಆದರೆ, ಸಬ್ಸಿಡಿ ಅವಧಿ ಮುಗಿದ ನಂತರ ಸ್ವಂತ ಖರ್ಚಿನಲ್ಲಿ ವಿಮಾನ ಹಾರಾಟ ಮುಂದುವರಿಸಲು ಆಸಕ್ತಿ ತೋರಿಸಿಲ್ಲ. ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದ ಕಾರಣ ವಿಮಾನಯಾನ ಸಂಸ್ಥೆಗಳಿಗೆ ನಷ್ಟವಾಗುತ್ತಿತ್ತು. ಹೀಗಾಗಿ ಹಲವು ಸಂಸ್ಥೆಗಳು ಸೇವೆಯನ್ನು ಸ್ಥಗಿತಗೊಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ಉಡಾನ್ ಯೋಜನೆಯಡಿ ಈ ಹಿಂದೆ ಕಡಿಮೆ ದರದಲ್ಲಿ ವಿಮಾನ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇಂಡಿಗೋ ಸಂಸ್ಥೆ ಈ ಹಿಂದೆ ಚೆನ್ನೈ-ಮೈಸೂರು ನಡುವಿನ ಪ್ರಯಾಣಕ್ಕೆ ₹2,700 ಟಿಕೆಟ್ ದರ ವಿಧಿಸುತ್ತಿತ್ತು. ಆದರೆ, ಈಗ ಇದೇ ಪ್ರಯಾಣಕ್ಕೆ ಸುಮಾರು ₹13,000 ಪಾವತಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಸ್ಪೈಸ್‌ಜೆಟ್ ಸಂಸ್ಥೆ ಕೆಲವು ಮಾರ್ಗಗಳಲ್ಲಿ ವಿಮಾನ ಸೇವೆ ಆರಂಭಿಸಲು ಅನುಮತಿ ಪಡೆದಿದ್ದರೂ, ಅನುಮತಿ ಪಡೆದ ಮಾರ್ಗಗಳಲ್ಲಿ ಶೇ.25ರಷ್ಟು ಸೇವೆಯನ್ನೂ ನಡೆಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

- Advertisement -

Latest News

error: Content is protected !!