
ಮಂಗಳೂರು: ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಕರ್ನಾಟಕ ಬ್ಯಾಂಕ್ನ ನೂತನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ಉದಯ ಕುಮಾರ್ ಹೆಬ್ಬಾರ್ ಅವರನ್ನು ನೇಮಕ ಮಾಡಲಾಗಿದೆ.
ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಮುಂದಿನ ಮೂರು ವರ್ಷಗಳ ಕಾಲ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಆದರೆ, ಈ ನೇಮಕಾತಿಗೆ ಬ್ಯಾಂಕ್ನ ಷೇರುದಾರರ ಅನುಮೋದನೆ ಪಡೆಯಬೇಕಿದೆ.
ಉದಯ ಕುಮಾರ್ ಹೆಬ್ಬಾರ್ ಅವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ 40 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಬ್ಯಾಂಕಿಂಗ್ ಕಾರ್ಯಾಚರಣೆ, ಕೃಷಿ ಹಣಕಾಸು, ಗ್ರಾಮೀಣ ಬ್ಯಾಂಕಿಂಗ್ ಮತ್ತು ಹಣಕಾಸು ನಿರ್ವಹಣೆಯಲ್ಲಿ ಪರಿಣತಿ ಹೊಂದಿದ್ದಾರೆ.
ಕರ್ನಾಟಕ ಬ್ಯಾಂಕ್ ಸೇರುವ ಮೊದಲು ಅವರು ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್ನಲ್ಲಿ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಸುಮಾರು 15 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಇದಕ್ಕೂ ಮೊದಲು ಬಾರ್ಕ್ಲೇಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಉದಯ ಕುಮಾರ್ ಅವರ ಅನುಭವ ಮತ್ತು ನಾಯಕತ್ವದಿಂದ ಕರ್ನಾಟಕ ಬ್ಯಾಂಕ್ನ ಬೆಳವಣಿಗೆಗೆ ಮತ್ತಷ್ಟು ಸಹಾಯವಾಗಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಪಿ. ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ, ಮಧ್ಯಂತರ ಎಂಡಿ ಮತ್ತು ಸಿಇಒ ಬಿಜಿ ಎಸ್.ಎಸ್. ಅವರು ನೂತನ ಎಂಡಿ ಅವರನ್ನು ಸ್ವಾಗತಿಸಿದ್ದು, ಅವರ ಅನುಭವದಿಂದ ಬ್ಯಾಂಕ್ನ ಕಾರ್ಯಕ್ಷಮತೆ ಮತ್ತು ಬೆಳವಣಿಗೆಗೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.


