
ಬ್ರಹ್ಮಾವರ: ಹೈ-ಟೆನ್ಷನ್ ವಿದ್ಯುತ್ ತಂತಿ ತಗುಲಿ ಒಣ ಹುಲ್ಲು ಸಾಗಿಸುತ್ತಿದ್ದ ಲಾರಿಯೊಂದಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಕುಂಜಾರು ತೆಂಕುಬೆಟ್ಟುವಿನಲ್ಲಿ ನಡೆದಿದೆ.
ಲಾರಿಯಲ್ಲಿ ಒಣ ಹುಲ್ಲಿನ ಕಟ್ಟುಗಳನ್ನು ಸಾಗಿಸುತ್ತಿದ್ದ ವೇಳೆ ರಸ್ತೆಯ ಮೇಲ್ಭಾಗದಲ್ಲಿ ಹಾದುಹೋಗಿದ್ದ ಹೈ-ಟೆನ್ಷನ್ ವಿದ್ಯುತ್ ತಂತಿ ಹುಲ್ಲಿಗೆ ತಗುಲಿದೆ. ಇದರಿಂದ ಉಂಟಾದ ಕಿಡಿಯಿಂದಾಗಿ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಎಚ್ಚೆತ್ತ ಚಾಲಕ, ಬೆಂಕಿ ಕಾಣಿಸಿಕೊಂಡ ಎರಡು ಹುಲ್ಲಿನ ಕಟ್ಟುಗಳನ್ನು ರಸ್ತೆಗೆ ಎಸೆದು, ಹೆಚ್ಚಿನ ಅಪಾಯವನ್ನು ತಪ್ಪಿಸಲು ಲಾರಿಯನ್ನು ಸಮೀಪದ ಮೈದಾನಕ್ಕೆ ಕೊಂಡೊಯ್ದಿದ್ದಾರೆ. ಬಳಿಕ ನೀರು ಸುರಿದು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.
ವಿಷಯ ತಿಳಿದ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಯಿಂದ ಅಂದಾಜು 1.5 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.


