
ಬೆಳ್ತಂಗಡಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆ ನಡೆಸುತ್ತಿರುವ ಎಸ್.ಐ.ಟಿ ತಂಡದ ಮುಖ್ಯಸ್ಥ ಚೇತನ್ ಸಿಂಗ್ ರಾಥೋಡ್ ಅವರು ನ.3 ರಂದು ಅಪರಾಹ್ನ 5 ಗಂಟೆಯ ಸುಮಾರಿಗೆ ಮತ್ತೊಮ್ಮೆ ಸೌಜನ್ಯಳ ಮೃತದೇಹ ಪತ್ತೆಯಾಗಿದ್ದ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಸಮೀಪದ ಮಣ್ಣಸಂಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಸ್.ಐ.ಟಿ ಮುಖ್ಯಸ್ಥರು ಒಬ್ಬರೇ ಸ್ಥಳಕ್ಕೆ ಆಗಮಿಸಿದ್ದು ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಎಸ್.ಐ.ಟಿ ಅಧಿಕಾರಿಗಳು ಸ್ಥಳಮಹಜರು ನಡೆಸಿದ ಬಳಿಕ ಎಸ್.ಐ.ಟಿ ಮುಖ್ಯಸ್ಥರು ಎರಡು ಬಾರಿ ಇಲ್ಲಿಗೆ ಭೇಟಿ ನೀಡಿರುವುದು ತನಿಖೆಗೆ ಸಂಬಂಧಿಸಿದಂತೆ ಯಾವುದೋ ಸುಳಿವುಗಳು ಲಭಿಸಿರುವ ಬಗ್ಗೆ ಅನುಮಾನ ಮೂಡಿಸಿದೆ.ಯಾವುದೋ ಎಳೆಯನ್ನು ಅಧಿಕಾರಿಗಳು ಮತ್ತೆ ಮತ್ತೆ ಪರಿಶೀಲಿಸುತ್ತಿರುವಂತೆ ಮೋಲ್ನೋಟಕ್ಕೆ ಕಂಡು ಬರುತ್ತಿದೆ. ಸೌಜನ್ಯ ಕುಟುಂಬಸ್ಥರು ನೀಡಿದ ಮಾಹಿತಿ ಸ್ಥಳ ಮಹಜರಿನ ಮಾಹಿತಿ ಹಾಗೂ ಹಿಂದಿನ ಕಡತಗಳ ಪರಿಶೀಲನೆಯಿಂದ ಲಭಿಸಿರುವ ಮಾಹಿತಿಗಳನ್ನು ಅಧಿಕಾರಿಗಳು ಮತ್ತೆ ಮತ್ತೆ ಪರಿಶೀಲಿಸುತ್ತಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.


