Saturday, October 31, 2026
Homeಅಪರಾಧಪ್ರೇಮ ಪ್ರಕರಣದಲ್ಲಿ ಜೈಲು ಪಾಲಾಗಿ ಬಿಡುಗಡೆಗೊಂಡಿದ್ದ ಯುವಕನಿಗೆ ಯುವತಿಯ ಮನೆಯವರಿಂದ ಹಲ್ಲೆ; ಜಿಲ್ಲಾಸ್ಪತ್ರೆ ಶೌಚಾಲಯದಲ್ಲಿ ಹಿಂದೂಪರ...

ಪ್ರೇಮ ಪ್ರಕರಣದಲ್ಲಿ ಜೈಲು ಪಾಲಾಗಿ ಬಿಡುಗಡೆಗೊಂಡಿದ್ದ ಯುವಕನಿಗೆ ಯುವತಿಯ ಮನೆಯವರಿಂದ ಹಲ್ಲೆ; ಜಿಲ್ಲಾಸ್ಪತ್ರೆ ಶೌಚಾಲಯದಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತ ಆತ್ಮಹತ್ಯೆಗೆ ಶರಣು!

- Advertisement -
- Advertisement -

ಉಡುಪಿ: ಯುವತಿಯ ಮನೆಗೆ ತೆರಳಿ ಗಲಾಟೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಹಲ್ಲೆಗೊಳಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಯುವಕನೊಬ್ಬ ಆಸ್ಪತ್ರೆಯ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಸಂಜೆ ಉಡುಪಿಯಲ್ಲಿ ನಡೆದಿದೆ.

ಮೃತ ಯುವಕನನ್ನು ಹಿಂದೂ ಜಾಗರಣ ವೇದಿಕೆಯ ನಾಯರ್‌ಕೊಡಿ ಘಟಕದ ಕಾರ್ಯಕರ್ತ ಪ್ರದೀಪ್ ಪೂಜಾರಿ ಎಂದು ಗುರುತಿಸಲಾಗಿದೆ.

ಪ್ರದೀಪ್ ಕಳೆದ ಏಳು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಇತ್ತೀಚೆಗೆ ಯುವತಿ ಪ್ರೀತಿಯನ್ನು ನಿರಾಕರಿಸಿದ್ದಳು. ಈ ಹಿನ್ನೆಲೆಯಲ್ಲಿ 2025ರಲ್ಲಿ ಯುವತಿಯನ್ನು ಅಡ್ಡಗಟ್ಟಿ ಗಲಾಟೆ ನಡೆಸಿದ ಆರೋಪದಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಪ್ರದೀಪ್ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು.

ಅಕ್ಟೋಬರ್ 27ರಂದು ಮತ್ತೆ ಯುವತಿಯ ಮನೆಗೆ ತೆರಳಿ ಗಲಾಟೆ ನಡೆಸಿದ್ದಾನೆ ಎನ್ನಲಾಗಿದೆ. ಈ ವೇಳೆ ಯುವತಿಯ ಮನೆಯವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರದೀಪ್ ಕೂಡ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ನೀಡಿದ್ದ ಎನ್ನಲಾಗಿದೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಪ್ರದೀಪ್‌ನನ್ನು ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಶುಕ್ರವಾರ ಸಂಜೆ ಆಸ್ಪತ್ರೆಯ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಡುಪಿ ನಗರ ಪೊಲೀಸ್ ಠಾಣೆಯ ಎದುರು ಜಮಾಯಿಸಿ, ಯುವಕನ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!