
ಮಂಗಳೂರು: ಫೇಸ್ಬುಕ್ನಲ್ಲಿ ಕೇರಳ ಸರ್ಕಾರದ ಆನ್ಲೈನ್ ಲಾಟರಿ ಜಾಹೀರಾತು ನೋಡಿ ಹಣ ಹೂಡಿಕೆ ಮಾಡಿದ 53 ವರ್ಷದ ವ್ಯಕ್ತಿಯೊಬ್ಬರು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ ₹7,22,804 ಕಳೆದುಕೊಂಡಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಮಂಗಳೂರು ಸೈಬರ್ ಹಾಗೂ ಆರ್ಥಿಕ ಅಪರಾಧಗಳ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೆಪ್ಟೆಂಬರ್ 25ರಂದು ದೂರುದಾರರು ಫೇಸ್ಬುಕ್ನಲ್ಲಿ ಲಾಟರಿ ಮಾರಾಟದ ವೀಡಿಯೊ ಜಾಹೀರಾತು ನೋಡಿ, ಅದರಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದರು. ಆರಂಭದಲ್ಲಿ ₹200 ನೀಡಿ ಲಾಟರಿ ಟಿಕೆಟ್ ಖರೀದಿಸಿದ ಅವರಿಗೆ, ಅದೇ ದಿನ ಸಂಜೆ “ನಿಮಗೆ ₹17 ಲಕ್ಷ ಬಹುಮಾನ ಬಂದಿದೆ” ಎಂದು ವಂಚಕರು ನಂಬಿಸಿದ್ದರು.
ಬಳಿಕ ಪ್ರೊಸೆಸಿಂಗ್ ಶುಲ್ಕ, GST ಹಾಗೂ ಆದಾಯ ತೆರಿಗೆ ಪಾವತಿಸುವಂತೆ ಹೇಳಿ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 27ರ ಅವಧಿಯಲ್ಲಿ ಹಂತ-ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಂದ ಒಟ್ಟು ₹7,22,804 ಪಡೆದುಕೊಂಡಿದ್ದಾರೆ. ಲಕ್ಷಾಂತರ ರೂಪಾಯಿ ಪಾವತಿಸಿದರೂ ಲಾಟರಿ ಹಣ ಕೈಸೇರದಿದ್ದಾಗ ಸಂತ್ರಸ್ತರು ಹಣ ವಾಪಸ್ ಕೇಳಿದ್ದಾರೆ. ಈ ವೇಳೆ ವಂಚಕರು ಮೊಬೈಲ್ ಸಂಪರ್ಕ ಕಡಿತಗೊಳಿಸಿ ಪರಾರಿಯಾಗಿದ್ದಾರೆ. ತಾನು ಮೋಸ ಹೋಗಿರುವುದನ್ನು ಅರಿತ ವ್ಯಕ್ತಿ ಪೊಲೀಸರ ಮೊರೆ ಹೋಗಿದ್ದಾರೆ.


