
ಮಂಗಳೂರು: ಧರ್ಮಸ್ಥಳದ ಸೌಜನ್ಯ ಅವರ ತಾಯಿ ಕುಸುಮಾವತಿ ಅವರೇ ಎಂಬ ವಿಚಾರದಲ್ಲಿ ಎಸ್ಐಟಿ ತಂಡಕ್ಕೆ ಯಾವುದೇ ಅನುಮಾನಗಳಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಧರ್ಮಸ್ಥಳದ ಗ್ರಾಮಸ್ಥ ಕಿಶೋರ್ ಎಂಬುವವರು ಕುಸುಮಾವತಿ ಅವರು ಸೌಜನ್ಯ ಅವರ ನಿಜವಾದ ತಾಯಿಯೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿ ಎಸ್ಐಟಿಗೆ ದೂರು ಸಲ್ಲಿಸಿದ್ದರು.
ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು ಹಾಗೂ ಸಲ್ಲಿಕೆಯಾದ ದೂರಿಗೆ ಪ್ರತಿಕ್ರಿಯಿಸಿದ ಸುಧೀರ್ ಕುಮಾರ್ ರೆಡ್ಡಿ, ಸೌಜನ್ಯ ಮತ್ತು ಅವರ ತಾಯಿ ಕುಸುಮಾವತಿ ಅವರ ನಡುವಿನ ಸಂಬಂಧದ ಬಗ್ಗೆ ತನಿಖಾ ತಂಡಕ್ಕೆ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದ್ದಾರೆ.
ಅಲ್ಲದೆ, ಎಸ್ಐಟಿ ತನ್ನ ತನಿಖೆಯ ನಿಗದಿತ ವ್ಯಾಪ್ತಿಯೊಳಗೆ ಮಾತ್ರ ಕಾರ್ಯನಿರ್ವಹಿಸಲಿದ್ದು, ಮೂಲ ಪ್ರಕರಣಕ್ಕೆ ಸಂಬಂಧಿಸದ ಅಥವಾ ಅಪ್ರಸ್ತುತ ವಿಚಾರಗಳ ತನಿಖೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಂತಹ ಸ್ಥಳೀಯ ವಿವಾದಗಳು, ಅನುಮಾನಗಳು ಅಥವಾ ದೂರುಗಳಿದ್ದಲ್ಲಿ, ಅವುಗಳನ್ನು ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಠಾಣೆಗಳ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.


