
ಮಂಗಳೂರು: ಜಪ್ಪಿನಮೊಗರು ಬಳಿ ಪಾದಚಾರಿಗೆ ಢಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದ ಖಾಸಗಿ ಬಸ್ಸನ್ನು ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ, ಬಸ್ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
ಅಕ್ಟೋಬರ್ 22ರಂದು ರಾತ್ರಿ 7.50ರ ಸುಮಾರಿಗೆ ಜಪ್ಪಿನಮೊಗರು ಎ.ಕೆ. ಲಾಡ್ಜ್ ಎದುರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಮಾರು 30ರಿಂದ 35 ವರ್ಷದ ಅಪರಿಚಿತ ಯುವಕನಿಗೆ ವಾಹನವೊಂದು ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಸ್ಥಳೀಯರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಪರೀಕ್ಷಿಸಿದ ವೈದ್ಯರು ಯುವಕ ಮೃತಪಟ್ಟಿರುವುದಾಗಿ ಘೋಷಿಸಿದ್ದರು.
ಈ ಬಗ್ಗೆ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಯುವಕನಿಗೆ ಡಿಕ್ಕಿ ಹೊಡೆದಿದ್ದು ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ ಎಂಬುದು ತಿಳಿದುಬಂದಿದೆ. ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಅಪಘಾತಕ್ಕೆ ಕಾರಣವಾದ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಕಾಸರಗೋಡು ಮೂಲದ ಸುಧೀರ್ ಕೆ. (40) ಎಂಬಾತ ಬಸ್ ಚಲಾಯಿಸುತ್ತಿದ್ದನು. ಚಾಲಕ ಮತ್ತು ಪ್ರಯಾಣಿಕರ ಮೊಬೈಲ್ ಲೊಕೇಶನ್ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


