
ಉಪ್ಪಿನಂಗಡಿ: ತೆಂಗಿನಕಾಯಿ ಕೀಳುವ ಕೆಲಸಕ್ಕೆಂದು ಉಪ್ಪಿನಂಗಡಿಯಿಂದ ಕರೆದೊಯ್ಯಲಾಗಿದ್ದ ಕೂಲಿ ಕಾರ್ಮಿಕ ಶಿವಮೊಗ್ಗದಲ್ಲಿ ಸಂಶಯಾಸ್ಪದವಾಗಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಾರಿಂಜ ಬೈತಾರು ಮನೆ ನಿವಾಸಿ ನಾರಾಯಣ ಪೂಜಾರಿ ಅವರ ಪುತ್ರ ದೇವದಾಸ್ (47) ಮೃತರು. ಉಳ್ಳಾಲದ ನಿವಾಸಿ ಎನ್ನಲಾದ ಸಯೀದ್ ಹಸನ್ ಎಂಬಾತ ಅ. 23ರಂದು ದೇವದಾಸ್ ಅವರನ್ನು ಕೆಲಸಕ್ಕೆಂದು ಕರೆದೊಯ್ದಿದ್ದ ಎನ್ನಲಾಗಿದೆ. ಅ. 27ರಂದು ದೇವದಾಸ್ ಸಂಶಯಾಸ್ಪದವಾಗಿ ಮೃತಪಟ್ಟಿದ್ದಾರೆ.
ಪತಿಯ ಸಾವಿನ ಬಗ್ಗೆ ಮಾಹಿತಿ ನೀಡದೆ, ಅವರು ಆರೋಗ್ಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಯೀದ್ ಹಸನ್ ಸುಳ್ಳು ಹೇಳಿದ್ದಾನೆ ಎಂದು ಮೃತರ ಪತ್ನಿ ಪದ್ಮಲತಾ ಆರೋಪಿಸಿದ್ದಾರೆ. ಪತಿಗೆ ವಿಶ್ರಾಂತಿ ನೀಡದೆ ಕೆಲಸ ಮಾಡಿಸಿದ್ದರಿಂದ ಅಥವಾ ಹಿಂಸೆ ನೀಡಿದ್ದರಿಂದ ಸಾವು ಸಂಭವಿಸಿರಬಹುದು ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ದೂರು ಸ್ವೀಕರಿಸಲು ನಿರಾಕರಿಸಿದ ಆರೋಪ; ಪತಿಯ ಸಾವಿನ ಬಗ್ಗೆ ದೂರು ನೀಡಲು ಅ. 23ರ ರಾತ್ರಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿದಾಗ, ಸಾವು ಶಿವಮೊಗ್ಗದಲ್ಲಿ ಸಂಭವಿಸಿರುವುದರಿಂದ ಅಲ್ಲಿಯೇ ದೂರು ನೀಡುವಂತೆ ಪೊಲೀಸರು ಸೂಚಿಸಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಬಳಿಕ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಟಂದೂರು ಅವರು ಮಧ್ಯಪ್ರವೇಶಿಸಿ ಪೊಲೀಸ್ ಉನ್ನತಾಧಿಕಾರಿಗಳನ್ನು ಸಂಪರ್ಕಿಸಿದ ನಂತರ ಬುಧವಾರ ಪೊಲೀಸರು ದೂರು ಸ್ವೀಕರಿಸಲು ಮುಂದಾದರು ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.


