Thursday, October 29, 2026
Homeಕರಾವಳಿಮಂಗಳೂರುಪುತ್ತೂರು: ಜಮೀನು ದಾಖಲೆ ಸರಿಪಡಿಸುವ ನೆಪದಲ್ಲಿ ಯುವತಿಯ ಮಾನಭಂಗಕ್ಕೆ ಯತ್ನ ಆರೋಪ; ವ್ಯಕ್ತಿ ವಿರುದ್ಧ ಪ್ರಕರಣ...

ಪುತ್ತೂರು: ಜಮೀನು ದಾಖಲೆ ಸರಿಪಡಿಸುವ ನೆಪದಲ್ಲಿ ಯುವತಿಯ ಮಾನಭಂಗಕ್ಕೆ ಯತ್ನ ಆರೋಪ; ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಪುತ್ತೂರು: ಜಮೀನಿನ ಹಕ್ಕುಪತ್ರ ಹಾಗೂ ದಾಖಲೆಗಳನ್ನು ಸರಿಪಡಿಸಿಕೊಡುವುದಾಗಿ ನಂಬಿಸಿ ಯುವತಿಯನ್ನು ಮನೆಗೆ ಕರೆದೊಯ್ದು ಮಾನಭಂಗಕ್ಕೆ ಯತ್ನಿಸಿ, ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಬಲ್ನಾಡು ನಿವಾಸಿ ಜಯರಾಮ ಎಂಬುವವರ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆಯ ವಿವರ: ಮಂಗಳೂರಿನ ವೆನ್‌ಲಾಕ್ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಯುವತಿಯು, ಜೂನ್ ತಿಂಗಳಿನಿಂದ ಕೊಟ್ಟಾರಚೌಕಿಯಲ್ಲಿರುವ ಸಹಪಾಠಿ ಮಮತಾ ಎಂಬುವವರ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ವಾಸವಿದ್ದರು. ಈ ವೇಳೆ ಯುವತಿಯು ತನ್ನ ಕುಟುಂಬದ ಜಮೀನಿನ ದಾಖಲೆಗಳಲ್ಲಿರುವ ಸಮಸ್ಯೆಯ ಬಗ್ಗೆ ಮಮತಾ ಅವರಲ್ಲಿ ಹಂಚಿಕೊಂಡಿದ್ದರು. ಮಮತಾ ಅವರ ಪತಿ ಜಯರಾಮ ಅವರು ದಾಖಲೆಗಳನ್ನು ಸರಿಪಡಿಸಿ ಕೊಡುವುದಾಗಿ ಭರವಸೆ ನೀಡಿದ್ದರೆನ್ನಲಾಗಿದೆ.

ಅಕ್ಟೋಬರ್ 17ರಂದು ಯುವತಿ ಜಮೀನಿನ ದಾಖಲೆಗಳೊಂದಿಗೆ ಪುತ್ತೂರು ಶಾಸಕರ ಕಚೇರಿಗೆ ಬಂದಿದ್ದರಾದರೂ, ಶಾಸಕರು ಇಲ್ಲದ ಕಾರಣ ಮಂಗಳೂರಿಗೆ ವಾಪಸಾಗಿದ್ದರು. ಬಳಿಕ ಆಕ್ಟೋಬರ್ 23ರಂದು ಕರೆ ಮಾಡಿದ ಜಯರಾಮ, ಮರುದಿನ ಒಬ್ಬರೇ ಪುತ್ತೂರಿಗೆ ಬರುವಂತೆ ತಿಳಿಸಿದ್ದರು. ಅದರಂತೆ ಅಕ್ಟೋಬರ್ 24ರಂದು ಪುತ್ತೂರಿಗೆ ಆಗಮಿಸಿದ ಯುವತಿಯನ್ನು ಶಾಸಕರ ಕಚೇರಿಯಲ್ಲಿ ಶಾಸಕರಿಲ್ಲ ಎಂಬ ನೆಪ ಹೇಳಿ ನೆಲ್ಲಿಗುಂಡಿಯಲ್ಲಿರುವ ತಮ್ಮ ಮನೆಗೆ ಸ್ಕೂಟರ್‌ನಲ್ಲಿ ಕರೆದೊಯ್ದಿದ್ದರು.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಹಾಕಿ ಜಯರಾಮ ಯುವತಿಯ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಯುವತಿ ಜೋರಾಗಿ ಕಿರುಚಿ ಅಲ್ಲಿಂದ ತಪ್ಪಿಸಿಕೊಂಡು ಹೊರಬಂದಿದ್ದಾರೆ. ಘಟನೆಯನ್ನು ಯಾರ ಮುಂದೆಯೂ ಬಾಯ್ಬಿಡಬಾರದು, ತಿಳಿಸಿದರೆ ಜೀವಸಹಿತ ಬಿಡುವುದಿಲ್ಲ ಎಂದು ಆರೋಪಿ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಷ್ಟೇ ಅಲ್ಲದೆ, ಈ ಕೃತ್ಯದ ಬಳಿಕವೂ ಮಂಗಳೂರಿನ ವಸತಿ ಮನೆಯಲ್ಲಿದ್ದ ಯುವತಿಗೆ ಪದೇ ಪದೇ ಕಿರುಕುಳ ನೀಡಿ ತನ್ನ ಲೈಂಗಿಕ ಆಸೆಗೆ ಒಪ್ಪುವಂತೆ ಒತ್ತಡ ಹೇರುತ್ತಿದ್ದರೆಂದು ಯುವತಿ ಆರೋಪಿಸಿದ್ದು, ಪುತ್ತೂರು ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

- Advertisement -

Latest News

error: Content is protected !!