ಉಡುಪಿಯಲ್ಲಿ ಬಾಡಿಗೆ ಮನೆಯ ಠೇವಣಿ (ಡೆಪಾಸಿಟ್) ಹಣ ವಾಪಸ್ ನೀಡುವ ವಿಚಾರದಲ್ಲಿ ಉಂಟಾದ ಗಂಭೀರ ವಿವಾದ, ಕೊನೆಗೆ ಆಸಿಡ್ ದಾಳಿಯಲ್ಲಿ ಅಂತ್ಯವಾಗಿದೆ. ಠೇವಣಿ ಹಣ ಮರಳಿಸಿಲ್ಲ ಎಂಬ ಕೋಪದಲ್ಲಿ ವ್ಯಕ್ತಿಯೊಬ್ಬ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ ಆಸಿಡ್ ಎರಚಿ ಭೀಕರ ಹಲ್ಲೆ ನಡೆಸಿದ ಘಟನೆ ಬುಧವಾರ ನಡೆದಿದೆ.
ದಾಳಿಯಲ್ಲಿ ಇಂದ್ರಾಳಿ ಬುಡ್ನಾರು ನಿವಾಸಿ, ಎಂಬ್ರಾಯ್ಡರಿ ಅಂಗಡಿ ಮಾಲಕ ನವೀನ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಸುರೇಶ್ ಆಚಾರ್ಯ (48) ಎಂಬುವವರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ವ್ಯಾಜ್ಯಕ್ಕೆ ಕಾರಣವೇನು? ವೃತ್ತಿಯಲ್ಲಿ ಅಕ್ಕಸಾಲಿಗನಾಗಿರುವ ಆರೋಪಿ ಸುರೇಶ್ ಆಚಾರ್ಯ, ಈ ಹಿಂದೆ ನವೀನ್ ಕುಮಾರ್ ಅವರ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಮನೆ ಖಾಲಿ ಮಾಡುವ ಸಂದರ್ಭದಲ್ಲಿ ತಾನು ನೀಡಿದ್ದ ₹20,000 ಠೇವಣಿ ಹಣವನ್ನು ವಾಪಸ್ ನೀಡುವಂತೆ ನವೀನ್ ಅವರಲ್ಲಿ ಕೇಳಿದ್ದ. ಆದರೆ, ಮನೆಯನ್ನು ಹಾಳುಗೆಡವಲಾಗಿದೆ ಎಂಬ ಕಾರಣ ನೀಡಿ ನವೀನ್ ಡೆಪಾಸಿಟ್ ಮೊತ್ತವನ್ನು ನೀಡಲು ನಿರಾಕರಿಸಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಈ ಹಿಂದೆಯೂ ಜಗಳ ನಡೆದಿತ್ತು.
ಕೃತ್ಯ ಎಸಗಿದ್ದು ಹೇಗೆ? ಬುಧವಾರ ಮದ್ಯದ ಅಮಲಿನಲ್ಲಿದ್ದ ಸುರೇಶ್ ಆಚಾರ್ಯ, ತನ್ನ ಸ್ಕೂಟರ್‌ನಲ್ಲಿ ಮಾರಕಾಯುಧ ಹಾಗೂ ಆಸಿಡ್ ತಂದು ನವೀನ್ ಅವರ ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿದ್ದಾನೆ. ಮತ್ತೆ ಠೇವಣಿ ಹಣದ ಬಗ್ಗೆ ಮಾತನಾಡಿ ಜಗಳ ತೆಗೆದ ಸುರೇಶ್, ತಂದಿದ್ದ ಆಸಿಡ್ ಅನ್ನು ನವೀನ್ ಅವರ ಮೇಲೆ ಎರಚಿ, ತಲವಾರಿನಿಂದ ದಾಳಿ ನಡೆಸಿದ್ದಾನೆ. ಕೃತ್ಯ ಎಸಗಿದ ಬಳಿಕ ಅದೇ ಸ್ಕೂಟರ್‌ನಲ್ಲಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಇದೀಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.


