ಮಹಾರಾಷ್ಟ್ರದಲ್ಲಿ ವರದಿಯಾಗಿರುವ ವಿಚಿತ್ರ ಹಾಗೂ ಅಚ್ಚರಿಯ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. 19 ವರ್ಷದ ಯುವಕನೊಬ್ಬ ತಾನು ಹೊಸದಾಗಿ ಖರೀದಿಸಿದ ‘ಮಹೀಂದ್ರಾ ಥಾರ್’ ಕಾರಿಗೆ ಪೂಜೆ ಮಾಡಿಸಲು ಸ್ವಂತ ಚಿಕ್ಕಪ್ಪನನ್ನೇ ಕರೆದು ಉದ್ಘಾಟನೆ ಮಾಡಿಸಿದ್ದಾನೆ. ಆದರೆ, ಈ ಖುಷಿಯ ಬೆನ್ನಲ್ಲೇ ಒಂದು ಶಾಕಿಂಗ್ ಟ್ವಿಸ್ಟ್ ಹೊರಬಿದ್ದಿದೆ!
ಯುವಕ ಕಾರು ಖರೀದಿಸಿದ ಖುಷಿಯಲ್ಲಿ ತನ್ನ ಚಿಕ್ಕಪ್ಪನನ್ನು ಆಹ್ವಾನಿಸಿ, ಸಮ್ಮುಖದಲ್ಲೇ ವಾಹನಕ್ಕೆ ಪೂಜೆ ನೆರವೇರಿಸಿದ್ದ. ಚಿಕ್ಕಪ್ಪ ಕೂಡ ಮಗನಂತಿದ್ದ ಯುವಕನ ಸಾಧನೆಗೆ ಮೆಚ್ಚಿ ಆಶೀರ್ವದಿಸಿದ್ದರು. “ನೋಡು, ಆತ ಎಷ್ಟು ಚಿಕ್ಕ ವಯಸ್ಸಿಗೆ ಕಷ್ಟಪಟ್ಟು ಸಂಪಾದಿಸಿ ಸ್ವಂತ ಕಾರು ತಗೊಂಡಿದ್ದಾನೆ, ನೀನು ಆತನನ್ನು ನೋಡಿ ಕಲಿ” ಎಂದು ಚಿಕ್ಕಪ್ಪ ತಮ್ಮ ಸ್ವಂತ ಮಗನಿಗೆ ಬುದ್ಧಿವಾದ ಕೂಡ ಹೇಳಿದ್ದರು!
ಪೂಜೆ ಮುಗಿದ ಕೆಲವೇ ದಿನಗಳಲ್ಲಿ ಚಿಕ್ಕಪ್ಪನ ಮನೆಯಲ್ಲಿದ್ದ ಸುಮಾರು ₹14.5 ಲಕ್ಷ ಮೌಲ್ಯದ ಚಿನ್ನಾಭರಣಗಳು ಕಾಣೆಯಾಗಿದ್ದವು. ಈ ಕುರಿತು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಬೆನ್ನತ್ತಿದ ಪೊಲೀಸರು ತನಿಖೆ ನಡೆಸಿದಾಗ ಕಳ್ಳತನದ ಅಸಲಿ ರೂವಾರಿ ಅದೇ 19 ವರ್ಷದ ಯುವಕ ಎಂಬುದು ಬೆಳಕಿಗೆ ಬಂದಿದೆ!
ತನ್ನ ಚಿಕ್ಕಪ್ಪನ ಮನೆಯಲ್ಲೇ ಚಿನ್ನ ಕದ್ದು, ಅದನ್ನು ₹10 ಲಕ್ಷಕ್ಕೆ ಮಾರಿ, ಆ ಹಣದಿಂದ ಯುವಕ ಥಾರ್ ಕಾರು ಖರೀದಿಸಿದ್ದ. ಅಷ್ಟೇ ಅಲ್ಲದೆ, ಯಾರ ಮನೆಗೆ ಕನ್ನ ಹಾಕಿದ್ದನೋ ಅದೇ ಚಿಕ್ಕಪ್ಪನ ಕೈಯಿಂದಲೇ ಆ ಕಾರನ್ನು ಉದ್ಘಾಟನೆ ಮಾಡಿಸಿದ್ದ. ಸದ್ಯ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.


