ಕಾಸರಗೋಡು: ಕಳೆದುಹೋದ ಮೊಬೈಲ್ ಫೋನ್ವೊಂದನ್ನು ಕದ್ದು ಮಾರಾಟ ಮಾಡಿದ ಆರೋಪದ ಮೇಲೆ ಚಂದೇರಾ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಬೈಜು (41) ವಿರುದ್ಧ ಪ್ರಕರಣ ದಾಖಲಾಗಿದೆ.
ಅಕ್ಟೋಬರ್ 8ರಂದು ಚಂದೇರಾ ಪೊಲೀಸ್ ಠಾಣೆಯ ಸಮೀಪದ ರಸ್ತೆಯಲ್ಲಿ ವಲಸೆ ಕಾರ್ಮಿಕನಿಗೆ ಸುಮಾರು 10,000 ರೂ. ಮೌಲ್ಯದ ಮೊಬೈಲ್ ಫೋನ್ ಸಿಕ್ಕಿತ್ತು. ಆತ ಅದನ್ನು ಪೊಲೀಸ್ ಸಿಬ್ಬಂದಿಗೆ ಹಸ್ತಾಂತರಿಸಿದ್ದು, ಪೊಲೀಸರು ಠಾಣೆಯ ರಿಜಿಸ್ಟರ್ನಲ್ಲಿ ದಾಖಲಿಸಿ ಮೇಜಿನ ಡ್ರಾಯರ್ನಲ್ಲಿ ಇಟ್ಟಿದ್ದರು.
ವಿಚಾರಣೆ ವೇಳೆ ಈ ಮೊಬೈಲ್ ಪಯ್ಯನೂರಿನ ರಾಮಂತಳಿಯ ಮಹಿಳೆಯೊಬ್ಬರಿಗೆ ಸೇರಿದ್ದು ಎಂಬುದು ತಿಳಿದುಬಂದಿತ್ತು. ಬಳಿಕ ಮೊಬೈಲ್ ಪಡೆಯಲು ಆಕೆಯ ಮಗ ಠಾಣೆಗೆ ಬಂದಾಗ ಫೋನ್ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿ ಸೈಬರ್ ಸೆಲ್ ನೆರವಿನಿಂದ ಮೊಬೈಲ್ನ ಐಎಂಇಐ ಸಂಖ್ಯೆಯನ್ನು ಪತ್ತೆಹಚ್ಚಿದ್ದಾರೆ. ಬದಿಯಡ್ಕದ ನೀರ್ಚಾಲ್ ನಿವಾಸಿಯೊಬ್ಬರು ಹೊಸ ಸಿಮ್ ಕಾರ್ಡ್ ಬಳಸಿ ಆ ಮೊಬೈಲ್ ಬಳಸುತ್ತಿರುವುದು ತನಿಖೆಯಲ್ಲಿ ಗೊತ್ತಾಗಿದೆ. ವಿಚಾರಣೆ ವೇಳೆ ತಾನು ಚಂದೇರಾ ಪೊಲೀಸ್ ಠಾಣೆಯ ಅಧಿಕಾರಿ ಬೈಜು ಅವರಿಂದ ಮೊಬೈಲ್ ಖರೀದಿಸಿರುವುದಾಗಿ ಆತ ತಿಳಿಸಿದ್ದಾನೆ ಎನ್ನಲಾಗಿದೆ.
ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅಕ್ಟೋಬರ್ 12ರಂದು ಕರ್ತವ್ಯದಲ್ಲಿದ್ದ ಬೈಜು ಮೇಜಿನ ಡ್ರಾಯರ್ನಿಂದ ಮೊಬೈಲ್ ತೆಗೆದು ಅದರಲ್ಲಿದ್ದ ಹಳೆಯ ಸಿಮ್ ಕಾರ್ಡ್ ಅನ್ನು ತೆಗೆಯುತ್ತಿರುವ ದೃಶ್ಯಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
ಈ ಸಂಬಂಧ ಆರೋಪಿ ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಶಿಸ್ತು ಕ್ರಮಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ವಿವರವಾದ ವರದಿ ಸಲ್ಲಿಸಲಾಗಿದೆ.


