Wednesday, October 28, 2026
Homeಅಪರಾಧರೌಡಿಶೀಟರ್ ಸುಜಿತ್ ಪಿಂಟೊ ಕೊಲೆ ಪ್ರಕರಣ; ಮತ್ತೋರ್ವ ಆರೋಪಿಯ ಬಂಧನ

ರೌಡಿಶೀಟರ್ ಸುಜಿತ್ ಪಿಂಟೊ ಕೊಲೆ ಪ್ರಕರಣ; ಮತ್ತೋರ್ವ ಆರೋಪಿಯ ಬಂಧನ

- Advertisement -
- Advertisement -

ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಕಾಡಿಯಲ್ಲಿ ಮಂಗಳವಾರ ರಾತ್ರಿ ನಡೆದ ರೌಡಿಶೀಟರ್ ಸುಜಿತ್ ಪಿಂಟೊ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬೈಕಾಡಿ ನಿವಾಸಿ ಪ್ರದೀಪ್ ಪೂಜಾರಿ ಎಂದು ಗುರುತಿಸಲಾಗಿದೆ. ಈತ ಪ್ರಕರಣದ ಪ್ರಮುಖ ಆರೋಪಿ ಪ್ರಮೋದ್ ಪೂಜಾರಿಯ ಸಹೋದರನಾಗಿದ್ದಾನೆ.

ಪ್ರಕರಣದ ಪ್ರಮುಖ ಆರೋಪಿ ಪ್ರಮೋದ್ ಪೂಜಾರಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಇದೀಗ ಪರಾರಿಯಾಗಿದ್ದ ಪ್ರದೀಪ್ ಪೂಜಾರಿಯನ್ನೂ ಬಂಧಿಸಿದ್ದಾರೆ. ಪ್ರದೀಪ್ ರಿಕ್ಷಾ ಚಾಲಕನಾಗಿದ್ದು, ಪ್ರಮೋದ್ ಗಾರೆ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಉಡುಪಿ ಸಂತೆಕಟ್ಟೆಯಲ್ಲಿ ವಾಸವಾಗಿದ್ದ ಸುಜಿತ್ ಪಿಂಟೊ ಐದು ವರ್ಷಗಳ ಹಿಂದೆ ಬೈಕಾಡಿಗೆ ಸ್ಥಳಾಂತರಗೊಂಡಿದ್ದ. ಸುಜಿತ್, ಪ್ರಮೋದ್ ಮತ್ತು ಪ್ರದೀಪ್ ಒಂದೇ ತಂಡದಲ್ಲಿದ್ದವರು ಎನ್ನಲಾಗಿದೆ. ಇವರು ಮದ್ಯಪಾನ ಮಾಡಿ ಆಗಾಗ ಪರಸ್ಪರ ಗಲಾಟೆ ಮಾಡಿಕೊಳ್ಳುತ್ತಿದ್ದರು. ಕಳೆದ ಕೆಲವು ದಿನಗಳಿಂದ ಸುಜಿತ್ ಪಿಂಟೊ ಸಹೋದರರಿಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಂಸೆ ನೀಡುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ.

ಇದೇ ವಿಚಾರವಾಗಿ ಉಂಟಾಗಿದ್ದ ದ್ವೇಷದ ಹಿನ್ನೆಲೆಯಲ್ಲಿ ಬೈಕಾಡಿ ಸರ್ಕಲ್ ಬಳಿ ರಾತ್ರಿ ಭೇಟಿಯಾಗುವಂತೆ ಪ್ರಮೋದ್ ಮತ್ತು ಪ್ರದೀಪ್, ಸುಜಿತ್ ಪಿಂಟೊಗೆ ತಿಳಿಸಿದ್ದರು ಎನ್ನಲಾಗಿದೆ. ಅದರಂತೆ ಸುಜಿತ್ ತನ್ನ ಗೆಳೆಯನೊಂದಿಗೆ ಸ್ಥಳಕ್ಕೆ ಬಂದಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದ್ದು, ಪ್ರಮೋದ್ ಪೂಜಾರಿ ಕಬ್ಬಿಣದ ರಾಡ್‌ನಿಂದ ಸುಜಿತ್ ಪಿಂಟೊ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ತಕ್ಷಣವೇ ಪ್ರಮೋದ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಪರಾರಿಯಾಗಿದ್ದ ಪ್ರದೀಪ್‌ಗಾಗಿ ಶೋಧ ಕಾರ್ಯ ನಡೆಸಿ ಆತನನ್ನೂ ಬಂಧಿಸಿದ್ದಾರೆ. ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!